ಕರ್ನಾಟಕ

karnataka

ETV Bharat / bharat

ದೆಹಲಿ- ಭೋಪಾಲ್​ ವಂದೇ ಭಾರತ್​ ಎಕ್ಸ್​ಪ್ರೆಸ್​ ಮೇಲೆ 12ನೇ ಸಲ ಕಲ್ಲು ತೂರಾಟ: ಕಿಟಕಿಯ ಗಾಜುಗಳು ಪುಡಿ

ಮಧ್ಯಪ್ರದೇಶದ ಭೋಪಾಲ್​ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್​ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಕಿಟಕಿಯ ಗಾಜುಗಳು ಪುಡಿಯಾಗಿದ್ದು, ಈ ರೈಲಿನ ಮೇಲೆ ನಡೆದ 12ನೇ ದಾಳಿಯಾಗಿದೆ.

ವಂದೇ ಭಾರತ್​ ಎಕ್ಸ್​ಪ್ರೆಸ್​ ಮೇಲೆ 12ನೇ ಸಲ ಕಲ್ಲಿನ ದಾಳಿ
ವಂದೇ ಭಾರತ್​ ಎಕ್ಸ್​ಪ್ರೆಸ್​ ಮೇಲೆ 12ನೇ ಸಲ ಕಲ್ಲಿನ ದಾಳಿ

By ETV Bharat Karnataka Team

Published : Dec 2, 2023, 1:34 PM IST

ಆಗ್ರಾ (ಉತ್ತರಪ್ರದೇಶ) :ಮೇಡ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿಸಲಾಗಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ಮೇಲೆ ಕಲ್ಲು ತೂರುವ ಕೃತ್ಯ ನಿಲ್ಲುತ್ತಿಲ್ಲ. ಮಧ್ಯಪ್ರದೇಶದ ಭೋಪಾಲ್​ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ ಸಂಪರ್ಕ ಕಲ್ಪಿಸುವ ರೈಲಿನ ಮೇಲೆ ಶುಕ್ರವಾರ ಸಂಜೆ ಮತ್ತೆ ಕಲ್ಲು ತೂರಲಾಗಿದೆ. ಈ ಘಟನೆಯಿಂದ ಕಿಟಕಿಯ ಗಾಜುಗಳಿಗೆ ಹಾನಿಯಾಗಿದ್ದು, 12 ನೇ ಬಾರಿಗೆ ಈ ರೈಲಿನ ಮೇಲೆ ದಾಳಿ ನಡೆದಿರುವುದು ಆತಂಕದ ಸಂಗತಿಯಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಶುಕ್ರವಾರ ಸಂಜೆ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಮಧ್ಯಪ್ರದೇಶದ ಭೋಪಾಲ್‌ಗೆ ಹೊರಟಿತ್ತು. ಮಥುರಾದ ಭೂತೇಶ್ವರ ಮತ್ತು ಮಥುರಾ ಕ್ಯಾಂಟ್ ನಿಲ್ದಾಣದ ನಡುವೆ ರೈಲು ಚಲಿಸುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿನಲ್ಲಿ ಕಲ್ಲು ಹೊಡೆಯಲಾಗಿದೆ. ಹೆಚ್ಚಿನ ಕಲ್ಲುಗಳು ಎಂಜಿನ್‌ನ ಲುಕಿಂಗ್ ಗ್ಲಾಸ್ ಮತ್ತು ಕೋಚ್ ನಂಬರ್ ಸಿ-12 ರ ಕಿಟಕಿಗಳಿಗೆ ಬಂದು ಬಿದ್ದಿವೆ. ಇಂಜಿನ್‌ನ ಮುಂಭಾಗದ ಗಾಜಿಗೆ ಕಲ್ಲು ಬಿದ್ದ ಬಳಿಕ ಲೋಕೋ ಪೈಲಟ್ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಥುರಾದ ಜಂಕ್ಷನ್‌ ಸಿಗ್ನಲ್‌ ಬಳಿ ನಿಲ್ಲಿಸಿದ್ದರು.

ವೇಗದಲ್ಲಿದ್ದ ರೈಲು ದಿಢೀರ್​ ನಿಂತಿದ್ದು ಮತ್ತು ಕಲ್ಲಿನ ದಾಳಿಯಿಂದಾಗಿ ಪ್ರಯಾಣಿಕರು ಆತಂಕಕ್ಕೀಡಾದರು. 15 ನಿಮಿಷಗಳ ಕಾಲ ರೈಲು ಇಲ್ಲಿಯೇ ನಿಂತಿತ್ತು. ಬಳಿಕ ರೈಲು ಆಗ್ರಾದ ಕ್ಯಾಂಟ್ ನಿಲ್ದಾಣಕ್ಕೆ ಬಂದಾಗ ತಪಾಸಣೆ ನಡೆಸಲಾಯಿತು. ಕೋಚ್​ನ ಗಾಜುಗಳು ಒಡೆದಿರುವುದು ಕಂಡುಬಂತು. ಕಲ್ಲು ತೂರಾಟದಲ್ಲಿ ಅದೃಷ್ಟವಶಾತ್​ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.

ತನಿಖೆಗೆ ಆರ್​ಪಿಎಫ್​ ತಂಡ ಭೋಪಾಲ್​ಗೆ:ಕಲ್ಲು ತೂರಾಟದ ತನಿಖೆಗಾಗಿ ರೈಲ್ವೆ ಭದ್ರತಾ ಪಡೆಯನ್ನು (ಆರ್‌ಪಿಎಫ್) ಭೋಪಾಲ್‌ಗೆ ಕಳುಹಿಸಲಾಗಿದೆ. ರೈಲಿನಲ್ಲಿನ ಸಿಸಿಟಿವಿಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಕಲ್ಲು ತೂರಾಟ ನಡೆಸಿದ ಆಗಂತುಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಥುರಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ದಾಳಿಕೋರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಘಟನೆಯ ತನಿಖೆಗಾಗಿ ಆರ್‌ಪಿಎಫ್‌ ತಂಡವನ್ನು ಭೋಪಾಲ್ ರೈಲ್ವೆ ವಿಭಾಗಕ್ಕೆ ಕಳುಹಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾಗಿರುವ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರ್‌ಪಿಎಫ್ ಹಿರಿಯ ಕಮಾಂಡೆಂಟ್ ಅನುಭವ್ ಜೈನ್ ಎಚ್ಚರಿಕೆ ರವಾನಿಸಿದ್ದಾರೆ.

8 ತಿಂಗಳಲ್ಲಿ 12 ಸಲ ಕಲ್ಲಿನ ದಾಳಿ:ಈ ವರ್ಷದ ಏಪ್ರಿಲ್ 1 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಈ ಎಂಟು ತಿಂಗಳಲ್ಲಿ ರೈಲಿನ ಮೇಲೆ 12 ಬಾರಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಪಲ್ವಾಲ್, ಮಥುರಾ, ಗ್ವಾಲಿಯರ್ ಮತ್ತು ಭೋಪಾಲ್ ಬಳಿ ಹೆಚ್ಚಿನ ಕೃತ್ಯಗಳು ವರದಿಯಾಗಿವೆ.

ಇದನ್ನೂ ಓದಿ:ಭುವನೇಶ್ವರ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಕಿಡಿಗೇಡಿಗಳಿಂದ ಕಲ್ಲು, ಕಿಟಕಿ ಗಾಜುಗಳಿಗೆ ಹಾನಿ

ABOUT THE AUTHOR

...view details