ದುರ್ಗ್(ಛತ್ತೀಸ್ಗಢ):ಛತ್ತೀಸ್ಗಢದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಮಧ್ಯೆ ಅದಾಗಲೇ ಕಿತ್ತಾಟ ಜೋರಾಗಿದೆ. ಸೋಮವಾರ ಬಿಜೆಪಿ ಕಾರ್ಯಕ್ರಮದ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಕೃತ್ಯ ಖಂಡಿಸಿ, ಮಂಗಳವಾರ ಬಿಜೆಪಿ ನಾಯಕರು ಹೆಲ್ಮೆಟ್ ಧರಿಸಿ ಕಾರ್ಯಕ್ರಮ ನಡೆಸಿದರು.
ಸುಪೇಲಾದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದು ರಾಜಕೀಯವಾಗಿ ವಾಗ್ದಾಳಿಗೆ ಕಾರಣವಾಯಿತು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದನ್ನು ಮಾಡಿದ್ದು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಇದರಿಂದ ಕುಪಿತವಾಗಿರುವ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಹೆಲ್ಮೆಟ್ ಧರಿಸಿದ ಮಾಜಿ ಸಚಿವ:ಇಂದು ದುರ್ಗ್ದ ಹಳೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಅಜಯ್ ಚಂದ್ರಾಕರ್ ಕ್ರಿಕೆಟ್ ಹೆಲ್ಮೆಟ್ ಧರಿಸಿ ವೇದಿಕೆಯ ಮೇಲೆ ಕಾಣಿಸಿಕೊಂಡರು. ಬಳಿಕ ಕಾಂಗ್ರೆಸ್ ಗುರಿಯಾಗಿಸಿ ವಾಗ್ದಾಳಿಗಿಳಿದರು. ನಮ್ಮ ವಿರೋಧಿಗಳು ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದಕ್ಕಾಗಿ ಹೆಲ್ಮೆಟ್ ಧರಿಸಿ ಬಂದಿದ್ದೇನೆ. ಕಲ್ಲು ತೂರಿದ್ದು ನನ್ನ ಮೇಲಲ್ಲ, ಛತ್ತೀಸ್ಗಢ ಜನರ ಮೇಲೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.