ಹೂಗ್ಲಿ:ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ ಕಲ್ಲು ತೂರಾಟದ ಘಟನೆ ವರದಿಯಾಗಿದೆ. ರಿಶ್ರಾ ರೈಲು ನಿಲ್ದಾಣದಿಂದ ಹೊರಡುವ ಎಲ್ಲಾ ಸ್ಥಳೀಯ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸುವಂತೆ ರೈಲ್ವೆ ಇಲಾಖೆಗೆ ಸೂಚನೆ ನೀಡಲಾಗಿದೆ. "ರಿಶ್ರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟದ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಸುರಕ್ಷತೆಗಾಗಿ, ಹೌರಾ - ಬರ್ಧಮಾನ್ ಮುಖ್ಯ ಮಾರ್ಗದಲ್ಲಿ ಎಲ್ಲ ಸ್ಥಳೀಯ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಈಸ್ಟರ್ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಶಿಕ್ ಮಿರಾನ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಯಾವುದೇ ಅಹಿತಕರ ಘಟನೆ ಅಥವಾ ಹಿಂಸಾಚಾರವನ್ನು ತಡೆಯಲು ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಹೂಗ್ಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷ (ಬಿಜೆಪಿ) ಶೋಭಾ ಯಾತ್ರೆಯ ಸಂದರ್ಭದಲ್ಲಿ ಘರ್ಷಣೆ ಸಂಭವಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ನಂತರ ರಾಜ್ಯ ಸರ್ಕಾರ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾದ್ಯಂತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.
"ಕಾನೂನುಬದ್ಧವಾಗಿ ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿಗೆ ಅಡಚಣೆ, ಕಿರಿಕಿರಿ ಅಥವಾ ಗಾಯ, ಅಥವಾ ಮಾನವ ಜೀವಕ್ಕೆ ಅಪಾಯ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಸಾರ್ವಜನಿಕ ನೆಮ್ಮದಿಯ ಭಂಗ ಉಂಟಾದಲ್ಲಿ ಸೆಕ್ಷನ್ 5 (2) ರ ಅಡಿಯಲ್ಲಿ ಆದೇಶದ ಪ್ರಕಾರ ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885ರ ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು, 2017 ರೊಂದಿಗೆ ನಿಷೇಧಾಜ್ಞೆ ಘೋಷಿಸಲಾಗಿದೆ" ಎಂದು ರಾಜ್ಯ ಸರ್ಕಾರ ಹೇಳಿದೆ.