ಕೋಲ್ಕತ್ತಾ (ಪಶ್ಚಿಮ ಬಂಗಾಳ): ಹೂಗ್ಲಿಯಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಶೋಭಾ ಯಾತ್ರೆಯ ವೇಳೆ ಕಲ್ಲು ತೂರಾಟ ನಡೆದಿದೆ.
ಗುರುವಾರ ರಾಮನವಮಿ ಆಚರಣೆ ವೇಳೆ ಹೌರಾದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಗಲಭೆಕೋರರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.
ಕಲ್ಲು ತೂರಾಟ ಮಾಡಿದವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ - ಇರಾನಿ:ಈ ಬಗ್ಗೆ ಶುಕ್ರವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಹೌರಾದಲ್ಲಿ ರಾಮನವಮಿ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿ, ಮೆರವಣಿಗೆಯ ಸಮಯದಲ್ಲಿ ಕಲ್ಲು ತೂರಾಟ ಮಾಡಿದವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಹೌರಾದಲ್ಲಿ ರಾಮನವಮಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ನ್ಯಾಯ ನೀಡುವ ಬದಲು ಮಮತಾ ಬಂಡೋಪಾಧ್ಯಾಯ (ಬ್ಯಾನರ್ಜಿ) ಅವರು ಕಾನೂನನ್ನು ಕೈಗೆತ್ತಿಕೊಂಡು ರಾಮನವಮಿ ಶೋಭಾ ಯಾತ್ರೆ ವೇಳೆ ದಾಳಿ ನಡೆಸಿದ ಕಲ್ಲು ತೂರಾಟಗಾರರಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಇರಾನಿ ಕಿಡಿಕಾರಿದ್ದರು.
"ಮಮತಾ ಹಿಂದೂ ಸಮುದಾಯದ ಮೇಲೆ ಎಷ್ಟು ದಿನ ದಾಳಿ ನಡೆಸುತ್ತಾರೆ ಎಂಬುದು ಪ್ರಶ್ನೆ. ಇದು ಮಮತಾ ಅವಧಿಯಲ್ಲಿ ಸಂಭವಿಸಿದ ಮೊದಲ ಘಟನೆಯಲ್ಲ. ಈ ಹಿಂದೆ 2022 ರಲ್ಲಿ ಲಕ್ಷ್ಮಿ ಪೂಜೆಯಂದು ದಲಿತರು ಪೂಜೆ ಮಾಡುವಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಆ ಸಮಯದಲ್ಲಿ ಅವರು ಮೌನವಾಗಿದ್ದರು." ಎಂದು ಆರೋಪಿಸಿದ್ದರು.