ಪಿಥೋರಗಡ್ (ಉತ್ತರಾಖಂಡ್):ಉತ್ತರಾಖಂಡದ ಪಿಥೋರಗಡ್ ಜಿಲ್ಲೆಯ ಭಾರತ - ನೇಪಾಳ ಗಡಿಯಲ್ಲಿ ಭಾನುವಾರ ಕಲ್ಲು ತೂರಾಟ ನಡೆದಿದ್ದು, ಭಾರತೀಯ ಕಾರ್ಮಿಕನೊಬ್ಬ ಗಾಯಗೊಂಡಿರುವುದಾಗಿ ಜಿಲ್ಲಾಡಳಿತ ಸೋಮವಾರ ಸ್ಪಷ್ಟಪಡಿಸಿದೆ. ಈ ಘಟನೆ ಪಿಥೋರಗಡ್ ಜಿಲ್ಲೆಯ ಗಡಿ ತಹಸಿಲ್ ಧಾರ್ಚುಲಾ ಪ್ರದೇಶದಲ್ಲಿ ನಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಧಾರ್ಚುಲಾ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವೇಶ್ ಶಶಾನಿ, ಪ್ರಸ್ತುತ, ಗಡಿಯಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂದು ಹೇಳಿದರು. ಸೋಮವಾರ ಭಾರತೀಯ ವ್ಯಾಪಾರಿಗಳ ಪ್ರತಿಭಟನೆ ನಂತರ ಜುಲಾಪುಲ್ನಲ್ಲಿ ಕೆಲವು ಗಂಟೆಗಳ ಕಾಲ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ನೇಪಾಳಿ ಆಡಳಿತದೊಂದಿಗೆ ಬುಧವಾರ ಸಭೆ ನಡೆಸಲಾಗುವುದು. ಭಾರತದಿಂದ ಪಿಥೋರಗಢ್ ಡಿಸಿ ನೇತೃತ್ವದ ತಂಡ ಸಭೆಯಲ್ಲಿ ಭಾಗವಹಿಸಲಿದೆ ಎಂದು ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವೇಶ್ ಶಶಾನಿ ತಿಳಿಸಿದ್ದಾರೆ.
ಭಾರತ - ನೇಪಾಳ ಗಡಿಯಲ್ಲಿರುವ ಧಾರ್ಚುಲಾ ಜುಲಾ ಸೇತುವೆಯಲ್ಲಿ ಭಾನುವಾರ ನೇಪಾಳಿ ನಾಗರಿಕರು ಭಾರತೀಯ ಕಾರ್ಮಿಕರು ಮತ್ತು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಭಾರತೀಯ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ. ಕಾಳಿ ನದಿಗೆ ಅಣೆಕಟ್ಟು ನಿರ್ಮಿಸುವುದನ್ನು ನೇಪಾಳಿ ನಾಗರಿಕರು ವಿರೋಧಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2020 ರಲ್ಲಿ ನೇಪಾಳವು ಭಾರತದ ಕಾಲಾ ಪಾನಿ, ಲಿಂಪಿಯಾಧ್ಯಾ ಮತ್ತು ಲಿಪುಲೇಖ್ ಅನ್ನು ತನ್ನದೇ ಪ್ರದೇಶ ಎಂದು ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿ ವೇಳೆ ಎರಡೂ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿತು. ನಂತರ ಮೇ 8, 2020 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಾಖಂಡದ ಧಾರ್ಚುಲಾದಿಂದ ಚೀನಾ ಗಡಿಯ ಲಿಪುಲೇಖ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕವನ್ನು ಉದ್ಘಾಟಿಸಿದ್ದರು. ಈ ಬೆನ್ನಲ್ಲೇ ನೇಪಾಳವು ಲಿಪುಲೇಖ್ ಅನ್ನು ತನ್ನ ಸ್ವಂತ ಪ್ರದೇಶವೆಂದು ಮತ್ತೆ ಪ್ರತಿಪಾದಿಸಿತ್ತು.
ಇದನ್ನೂ ಓದಿ:ಜಿ20 ಅಧ್ಯಕ್ಷತೆ: ಭಾರತದ ಆದ್ಯತೆ ಏನು?