ಭುವನೇಶ್ವರ(ಒಡಿಶಾ): ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಪ್ರಕರಣ ಮರುಕಳಿಸಿದೆ. ರೂರ್ಕೆಲಾ-ಭುವನೇಶ್ವರ ನಡುವೆ ಪ್ರಯಾಣಿಸುತ್ತಿದ್ದ ರೈಲಿನ (ಸಂಖ್ಯೆ 20835) ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ ಕಿಟಕಿಯ ಗಾಜುಗಳು ಜಖಂಗೊಂಡಿವೆ. ಮೆರಮಂಡಲಿ ಮತ್ತು ಬುಧಪಾಂಕ್ ಮಾರ್ಗಮಧ್ಯೆ ಕಲ್ಲು ತೂರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಕರಾವಳಿ ರೈಲ್ವೆಯ ಭದ್ರತಾ ವಿಭಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ಗೆ (ಜಿಆರ್‌ಪಿ) ಎಚ್ಚರಿಕೆ ನೀಡಲಾಗಿದೆ. ಕಟಕ್‌ನಿಂದ ಆರ್‌ಪಿಎಫ್ ಸಹಾಯಕ ಭದ್ರತಾ ಅಧಿಕಾರಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಕಲ್ಲು ತೂರಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
ಈಸ್ಟ್ ಕೋಸ್ಟ್ ರೈಲ್ವೆಯ ಎರಡೂ ಭದ್ರತಾ ವಿಭಾಗಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯತೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿರುವುದು ಇದೇ ಮೊದಲಲ್ಲ. ದೇಶದ ಇತರೆ ಭಾಗಗಳಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ. ಆದರೆ, ಇದುವರೆಗೆ ಯಾವುದೇ ಘಟನೆಯಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.