ಚಿತ್ರಕೂಟ(ಉತ್ತರ ಪ್ರದೇಶ):ಪ್ರಸಿದ್ಧ ಬಾಲಾಜಿ ದೇವಸ್ಥಾನದಿಂದ ಕೋಟ್ಯಂತರ ಮೌಲ್ಯದ ವಿಗ್ರಹ ಕಳುವಾಗಿತ್ತು. ಇದ್ದಕ್ಕಿದ್ದಂತೆ ಈ ವಿಗ್ರಹಗಳು ದೇಗುಲದ ಪೂಜಾರಿ ಮಹಾಂತ್ ಅವರ ಮನೆಯ ಹೊರಗೆ ಕ್ಷಮಾಪಣೆ ಪತ್ರದೊಂದಿಗೆ ಪತ್ತೆಯಾಗಿವೆ. ವಿಗ್ರಹಗಳನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿವರ: ಮೇ 9ರಂದು ತರೂಹಾನ್‌ನಲ್ಲಿರುವ ಪುರಾತನ ಬಾಲಾಜಿ ದೇವಾಲಯದಿಂದ ಅಷ್ಠಲೋಹ, ಹಿತ್ತಾಳೆ ಮತ್ತು ತಾಮ್ರದ 16 ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿದ್ದರು. ದೇಗುಲದ ಬೀಗ ಒಡೆದು ಒಳನುಗ್ಗಿ 5 ಕೆ.ಜಿ ತೂಕದ ಅಷ್ಠಧಾತು ಶ್ರೀರಾಮನ ವಿಗ್ರಹ, ಹಿತ್ತಾಳೆಯ ರಾಧಾಕೃಷ್ಣ ವಿಗ್ರಹ, ಬಾಲಾಜಿ ವಿಗ್ರಹ, ಲಡ್ಡು ಗೋಪಾಲನ ವಿಗ್ರಹ ಸೇರಿದಂತೆ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿದ್ದರು.
ದೇವಸ್ಥಾನದ ಅರ್ಚಕ ಮಹಂತ್ ರಾಮ್ ಬಾಲಕ ದಾಸ್ ಅವರ ಪತ್ನಿ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಸ್ವಚ್ಛಗೊಳಿಸುತ್ತಿದ್ದಾಗ ಆಘಾತಕಾರಿ ಸಂಗತಿ ಗೊತ್ತಾಗಿತ್ತು. ಕೂಡಲೇ ಅರ್ಚಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಷ್ಟೊತ್ತಿಗಾಗಲೇ ಸುದ್ದಿ ನಗರದ ತುಂಬೆಲ್ಲಾ ಹಬ್ಬಿತ್ತು. ಐದಾರು ದಿನಗಳಾದ್ರೂ ವಿಗ್ರಹದ ಬಗ್ಗೆ ಒಂದಿಷ್ಟೂ ಮಾಹಿತಿ ದೊರೆಯಲಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಅಷ್ಟರಲ್ಲೇ, ಅಂದರೆ ಪ್ರಕರಣ ನಡೆದು 6ನೇ ದಿನ ಪೂಜಾರಿಯ ಮನೆ ಮುಂಭಾಗದಲ್ಲೇ ಮೂರ್ತಿಗಳು ಪ್ರತ್ಯಕ್ಷವಾಗಿವೆ.