ಗುವಾಹಟಿ (ಅಸ್ಸೋಂ): ಶಾರುಖ್ ಖಾನ್ ಯಾರು? ಅವರ ಬಗ್ಗೆ ಮತ್ತು ಅವರ ಚಿತ್ರ ಪಠಾಣ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರದಂದು "ಶಾರುಖ್ ಅವರು ನನಗೆ ಕರೆ ಮಾಡಿದ್ದರು'' ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ನಾನು ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರ ಅವರ ಚಿತ್ರಗಳನ್ನು ನೋಡಿದ್ದೇನೆ. ನನಗೆ ಇನ್ನೂ ಶಾರುಖ್ ಖಾನ್ ಬಗ್ಗೆ ಹೆಚ್ಚು ತಿಳಿದಿಲ್ಲ. 2001 ರಿಂದ ನಾನು ಆರರಿಂದ ಏಳಕ್ಕಿಂತ ಹೆಚ್ಚು ಚಿತ್ರಗಳನ್ನು ನೋಡಿಲ್ಲ" ಎಂದು ಹೇಳಿದರು.
ಶಾರುಖ್ ಖಾನ್ ಅವರೊಂದಿಗಿನ ಸಂಭಾಷಣೆಯ ಕುರಿತು ಮಾತನಾಡಿದ ಹಮಿಂತ್ ಬಿಸ್ವಾ ಶರ್ಮಾ, ಶನಿವಾರ ಸಂಜೆ 7:40 ಕ್ಕೆ ''ನಾನು ಶಾರುಖ್ ಖಾನ್, ನಾನು ನಿಮ್ಮ ಜೊತೆ ಮಾತನಾಡಬೇಕು‘‘ ಎಂದು ನನಗೆ ಸಂದೇಶ ಬಂದಿತ್ತು. ಮೊಬೈಲ್ನಲ್ಲಿ ಸಾಕಷ್ಟು ಸಂದೇಶಗಳು ಬಾಕಿ ಇದ್ದವು. ಅದನ್ನೆಲ್ಲಾ ಡಿಲಿಟ್ ಮಾಡಿ, ಭಾನುವಾರ ಮುಂಜಾನೆ 2 ಗಂಟೆ ಸಮಯಕ್ಕೆ ''ನಾನು ಮಾತನಾಡಲು ಲಭ್ಯವಿದ್ದೇನೆ'' ಎಂದು ಮರು ಸಂದೇಶವನ್ನು ಕಳುಹಿಸಿದೆ. ನಂತರ ಅವರು ನನಗೆ ಕರೆ ಮಾಡಿ ನಮ್ಮ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ, ಯಾವುದೇ ತೊಂದರೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.
‘‘ನಾನು ಅವರ ಚಿತ್ರದ ಹೆಸರನ್ನು ಕೇಳಿದೆ, ಅವರು 'ಪಠಾಣ್' ಎಂದು ಹೇಳಿದರು. 'ಕೋಯಿ ಡಿಸ್ಟರ್ಬ್ ನಹೀ ಹೋಗಾ' (ಯಾವುದೇ ಅಡಚಣೆ ಆಗುವುದಿಲ್ಲ) ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಸಿಎಂ ಬಿಸ್ವಾ ಶರ್ಮಾ ಅವರು ಶಾರುಖ್ ಖಾನ್ ಜೊತೆಗಿನ ಸಂಭಾಷಣೆಯನ್ನು ವಿವರಿಸಿದರು. ಪಠಾಣ್ ಚಲನಚಿತ್ರದ ವಿರುದ್ಧ ನಡೆಯುತ್ತಿರುವ ಬಹಿಷ್ಕಾರದ ಪ್ರತಿಭಟನೆಯ ಬಗ್ಗೆ ಮಾತನಾಡಿ, ''ಚಿತ್ರವನ್ನು ನೋಡುವ ಆಸೆ ಇರುವವರು ನೋಡುತ್ತಾರೆ. ಚಲನಚಿತ್ರದ ಬಗ್ಗೆ ಆಸಕ್ತಿ ಇಲ್ಲದವರು ಬಿಟ್ಟುಬಿಡಬಹುದು ಎಂದು ಹೇಳಿದರು.