ಜೌನ್ಪುರ(ಉತ್ತರ ಪ್ರದೇಶ): ವೈದ್ಯಕೀಯ ಲೋಕದಲ್ಲಿ ಅನೇಕ ರೀತಿಯ ಆಶ್ಚರ್ಯಕರ ಘಟನೆಗಳು ಬೆಳಕಿಗೆ ಬರ್ತಾ ಇರುತ್ತವೆ. ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣ ನಡೆದಿದೆ. ಚಿಕಿತ್ಸೆಗೆಂದು ವೈದ್ಯರ ಬಳಿ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್ ಪತ್ತೆಯಾಗಿದೆ.
ಹೊಟ್ಟೆ ನೋವಿನ ಸಮಸ್ಯೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ವ್ಯಕ್ತಿಯೋರ್ವ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದನು. ವೈದ್ಯಕೀಯ ತಪಾಸಣೆ ಬಳಿಕ ಆತನಿಗೆ ಆಪರೇಷನ್ ಮಾಡಲಾಗಿದ್ದು, ವೈದ್ಯರ ತಂಡ ಬೆಚ್ಚಿಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಆತನ ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್ ಕಂಡು ಬಂದಿದೆ.
ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಜೌನ್ಪುರ ಜಿಲ್ಲೆಯ ಭತೌಲಿ ಗ್ರಾಮದ ನಿವಾಸಿ ಸಮರನಾಥ್ ಚಿಕಿತ್ಸೆಗೋಸ್ಕರ ಡಾ.ಲಾಲ್ ಬಹದ್ದೂರ್ ಸಿದ್ಧಾರ್ಥ್ ಅವರನ್ನು ಸಂಪರ್ಕಿಸಿದ್ದರು. ವೈದ್ಯಕೀಯ ತಪಾಸಣೆ ನಡೆಸಿ, ಎಕ್ಸ್-ರೇ ಮಾಡಲಾಗಿತ್ತು. ಎಕ್ಸ್-ರೇ ಸಂದರ್ಭ ಹೊಟ್ಟೆಯಲ್ಲಿ ಗಾಜಿನಂತಹ ವಸ್ತು ಕಂಡುಬಂದಿದೆ. ಶಸ್ತ್ರಚಿಕಿತ್ಸೆ ಮಾಡುವ ಬದಲು ಗುದದ್ವಾರದ ಮೂಲಕ ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದರಲ್ಲಿ ಯಶಸ್ವಿಯಾಗಿಲ್ಲ. ಇದಾದ ಬಳಿಕ ಆತನಿಗೆ ಆಪರೇಷನ್ ಮಾಡಿ, ಗ್ಲಾಸ್ ಹೊರತೆಗೆದಿದ್ದಾರೆ. ಅದಕ್ಕೋಸ್ಕರ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಗ್ಲಾಸ್ ಹೊಟ್ಟೆಯೊಳಗೆ ಹೋಗಿದ್ದು ಹೇಗೆ?: ಚಿಕಿತ್ಸೆಗೆಂದು ವೈದ್ಯರ ಬಳಿ ಬಂದ ಸಮರನಾಥ್ಗೆ ಹರ್ನಿಯಾ ಎಂಬ ಕಾಯಿಲೆ ಇದೆ ಎಂದು ಪತ್ನಿ ಮನೋರಮಾ ತಿಳಿಸಿದ್ದರು. ಹೀಗಾಗಿ, ಕಳೆದ ಕೆಲ ದಿನಗಳಿಂದ ಊಟ ಮಾಡಿರಲಿಲ್ಲ. ಜೊತೆಗೆ ಶೌಚಕ್ಕೂ ತೆರಳಿರಲಿಲ್ಲ. ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಗಾಜಿನಂತಹ ವಸ್ತು ಕಂಡು ಬಂದಿತ್ತು. ವೈದ್ಯರು ರೋಗಿಯನ್ನ ಪ್ರಶ್ನೆ ಮಾಡಿದಾಗ ಬಾಯಿ ಮೂಲಕ ಗ್ಲಾಸ್ ನುಂಗಿರುವುದಾಗಿ ಹೇಳಿಕೊಂಡಿದ್ದಾನೆ.
ವೈದ್ಯರು ಹೇಳಿದ್ದೇನು?:ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಾದ ಸಿದ್ಧಾರ್ಥ್ ಮಾತನಾಡಿ, ಬಾಯಿಯ ಮೂಲಕ ಗ್ಲಾಸ್ ನುಂಗಿರುವುದಾಗಿ ರೋಗಿ ಹೇಳುತ್ತಾನೆ. ಆದರೆ, ಹೊಟ್ಟೆಯಲ್ಲಿದ್ದ ಗ್ಲಾಸ್ ತಲೆಕೆಳಗಾದ ಆಕಾರದಲ್ಲಿದೆ. ಗುದದ್ವಾರದ ಮೂಲಕ ಅದು ಒಳಗೆ ಹೋಗಿದೆ ಎಂದು ತಿಳಿಸಿದ್ದಾರೆ.