ಚಂಡೀಗಢ(ಪಂಜಾಬ್): ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಉದ್ಯೋಗ ಮೀಸಲಾತಿ ನೀಡಬೇಕೆಂಬ ಹರಿಯಾಣ ಸರ್ಕಾರದ ಆದೇಶಕ್ಕೆ ಇದೀಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಖಾಸಗಿ ಕಂಪನಿಗಳಿಗೆ ತಾತ್ಕಾಲಿಕ ಜಯ ಸಿಕ್ಕಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಕಳೆದ ವರ್ಷ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮೀಸಲಾತಿ ನೀಡಬೇಕೆಂಬ ಆದೇಶ ಹೊರಡಿಸಿತ್ತು. ಇದನ್ನೂ 2022ರ ಜನವರಿ ತಿಂಗಳಿಂದ ಕಾನೂನು ಮಾಡಿ ಜಾರಿಗೆ ತರಲು ಅಧಿಸೂಚನೆ ಸಹ ಹೊರಡಿಸಿತ್ತು.
ಹರಿಯಾಣ ಸರ್ಕಾರದ ನಿರ್ಧಾರ ಪ್ರಶ್ನೆ ಮಾಡಿದ್ದ ಭಾರತೀಯ ಕೈಗಾರಿಕೆಗಳ ಒಕ್ಕೂಟ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿರಿ:ಕೇಂದ್ರ ಲೋಕಸೇವಾ ಆಯೋಗದಲ್ಲಿ 485 ಖಾಲಿ ಹುದ್ದೆ: ರಾಜ್ಯಸಭೆಯಲ್ಲಿ ಕೇಂದ್ರದ ಮಾಹಿತಿ
ಹರಿಯಾಣ ರಾಜ್ಯ ಸ್ಥಳೀಯರ ಉದ್ಯೋಗ ಕಾಯ್ದೆ ವಿಭಾಗ 1ರ ಪ್ರಕಾರ ರಾಜ್ಯದಲ್ಲಿರುವ ಅನೇಕ ಖಾಸಗಿ ಕಂಪನಿಗಳು 30 ಸಾವಿರ ಮಾಸಿಕ ವೇತನದ ಹುದ್ದೆಗಳನ್ನ ಶೇ. 75ರಷ್ಟು ಸ್ಥಳೀಯರಿಗೋಸ್ಕರ ಮೀಸಲು ಇಡುವಂತೆ ತಿಳಿಸಿತ್ತು.