ನವದೆಹಲಿ:ಕೊರೊನಾ ವ್ಯಾಕ್ಸಿನ್ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ರಾಜ್ಯ ಸರ್ಕಾರಗಳಿಗೆ ಇದೀಗ ಮತ್ತೊಂದು ಅಧಿಕಾರ ನೀಡಲಾಗಿದೆ. ಇನ್ಮುಂದೆ ವ್ಯಾಕ್ಸಿನ್ ಉತ್ಪಾದಕರಿಂದ ನೇರವಾಗಿ ಕೋವಿಡ್ ಲಸಿಕೆ ಖರೀದಿ ಮಾಡಲು ರಾಜ್ಯಗಳಿಗೆ ಕೇಂದ್ರ ಹಸಿರು ನಿಶಾನೆ ತೋರಿದೆ.
ಲಸಿಕೆ ತಯಾರಕರು ತಮ್ಮ ಪೂರೈಕೆಯ ಶೇ.50ರಷ್ಟು ಸರಬರಾಜನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರ್ವ ಘೋಷಿತ ಬೆಲೆಗೆ ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ. ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಇಷ್ಟುದಿನ ವ್ಯಾಕ್ಸಿನ್ ರವಾನೆ ಮಾಡುತ್ತಿತ್ತು. ಈ ವೇಳೆ, ಅನೇಕ ರಾಜ್ಯಗಳಿಂದ ಅಸಮಾಧಾನ ವ್ಯಕ್ತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತಮಗೆ ಕೇಂದ್ರದಿಂದ ವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದವು.
ಲಸಿಕೆ ತಯಾರಿಕರು ಮಾಸಿಕ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿಯಿಂದ ಬಿಡುಗಡೆಯಾಗುವ ಶೇ. 50ರಷ್ಟು ವ್ಯಾಕ್ಸಿನ್ ಕೇಂದ್ರ ಸರ್ಕಾರಕ್ಕೆ ಹಾಗೂ ಉಳಿದ ಶೇ. 50ರಷ್ಟು ಪ್ರಮಾಣವನ್ನ ರಾಜ್ಯಗಳು ಅಥವಾ ಮುಕ್ತು ಮಾರುಕಟ್ಟೆಯಲ್ಲಿ ಪೂರ್ವ ಘೋಷಿತ ಬೆಲೆಗೆ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇಂದು ತಜ್ಞ ವೈದ್ಯರು ಹಾಗೂ ವಿವಿಧ ಫಾರ್ಮಾ ಕಂಪನಿ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದರು. ಇದರ ಬೆನ್ನಲ್ಲೇ ಇದೀಗ ಈ ನಿರ್ಧಾರ ಹೊರಬಿದ್ದಿದೆ.
ಇದನ್ನೂ ಓದಿ: ಮೇ. 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ
ಮೇ. 1ರಿಂದ ದೇಶಾದ್ಯಂತ ಮೂರನೇ ಹಂತದ ಕೋವಿಡ್ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಗೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಕೋವಿಡ್ ವ್ಯಾಕ್ಸಿನ್ ಮಾರಾಟ ಮಾಡಲು ಲಸಿಕೆ ತಯಾರಕರಿಗೆ ಅವಕಾಶ ನೀಡಲಾಗಿದೆ. ಆದರೆ ಮುಂಚಿತವಾಗಿ ಬೆಲೆ ಘೋಷಣೆ ಮಾಡಬೇಕು ಎಂದು ತಿಳಿಸಿದೆ. ಅದೇ ಬೆಲೆಯ ಆಧಾರದ ಮೇಲೆ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ಲಸಿಕೆ ಖರೀದಿ ಮಾಡಬಹುದಾಗಿದೆ.