ನವದೆಹಲಿ:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇದಾದ ಬಳಿಕ ದೇಶವನ್ನುದ್ದೇಶಿಸಿ ನಮೋ ಮಾತನಾಡಿದರು.
ದೇಶದಲ್ಲಿ ಮತ್ತೊಮ್ಮೆ ಸವಾಲಿನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕೋವಿಡ್ ಪರಿಸ್ಥಿತಿ ನಿಭಾಯಿಸಲು ನಾನು ನಿಮ್ಮೆಲ್ಲರಲ್ಲೂ ಕೋರುತ್ತೇನೆ ಎಂದು ನಮೋ ಸಿಎಂ ಸಭೆಯಲ್ಲಿ ತಿಳಿಸಿದರು. ದೇಶದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದಿರುವ ನಮೋ, ಯಾವುದೇ ಕಾರಣಕ್ಕೂ ವೈರಸ್ ಲಘುವಾಗಿ ಪರಿಗಣಿಸಬೇಡಿ ಎಂದು ಕಿವಿಮಾತು ಹೇಳಿದರು. ದೇಶದಲ್ಲಿ ಎರಡನೇ ಅಲೆ ದಿಢೀರ್ ಆಗಿ ಹೆಚ್ಚಳವಾಗಿದ್ದು, ಪ್ರತಿಯೊಬ್ಬರಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಮೊದಲನೇ ಅಲೆಗಿಂತಲೂ ಎರಡನೇ ಅಲೆ ಅಪಾಯಕಾರಿಯಾಗಿದ್ದು, ಇದರ ತಡೆಗೆ ಯುದ್ಧೋಪಾದಿ ಕಾರ್ಯ ಅಗತ್ಯ ಎಂದರು.
ಹೆಚ್ಚು ಟೆಸ್ಟಿಂಗ್ ಮಾಡುವಂತೆ ಸೂಚನೆ
ಕೊರೊನಾ ಹರಡುವಿಕೆ ತಡೆಯಲು ಎಲ್ಲರ ಸಹಭಾಗಿತ್ವ ಅವಶ್ಯವಾಗಿದ್ದು, ಪಾಸಿಟಿವ್ ರೇಟ್ ಶೇ. 5ಕ್ಕಿಂತಲೂ ಕಡಿಮೆ ಮಾಡಬೇಕು. ಹೀಗಾಗಿ 2-3 ವಾರಗಳ ಕಾಲ ಕಠಿಣ ನಿಯಮ ಜಾರಿಗೊಳಿಸಿ ಎಂದು ತಿಳಿಸಿದರು. ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಹೆಚ್ಚು ಬಂದರೂ ಪರವಾಗಿಲ್ಲ. ಆದರೆ ಟೆಸ್ಟಿಂಗ್ ಗರಿಷ್ಠ ಪ್ರಮಾಣದಲ್ಲಿ ಮಾಡಿ. ಹೆಚ್ಚು ಕೊರೊನಾ ಪರೀಕ್ಷೆ ಮಾಡದೇ ಇದ್ರೆ ಅದು ಎಲ್ಲರಿಗೂ ಹರಡುತ್ತೆ. ಹೀಗಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ತಿಳಿಸಿದರು. ಇದೇ ವೇಳೆ ನೈಟ್ ಕರ್ಪ್ಯೂ ಎನ್ನುವ ಬದಲು ಕೊರೊನಾ ಕರ್ಪ್ಯೂ ಎಂದು ಕರೆಯಿರಿ ಎಂದು ಪ್ರಧಾನಿ ಸಲಹೆ ನೀಡಿದರು.
ದೇಶ ಮೊದಲ ಅಲೆ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದು, ಇದೀಗ ಎರಡನೇ ಅಲೆ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಮಹಾರಾಷ್ಟ್ರ, ಛತ್ತೀಸ್ಗಢ, ಗುಜರಾತ್, ಪಂಜಾಬ್ನಲ್ಲಿ ಹೆಚ್ಚಿನ ರೀತಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಅಗತ್ಯ ಎಂದರು. ಈ ಹಿಂದಿನ ರೀತಿ ಕಾಳಜಿ ವಹಿಸಿರುವುದು ಜನರು ಕಡಿಮೆ ಮಾಡಿದ್ದರಿಂದ ಸೋಂಕು ವೇಗವಾಗಿ ಹರಡುತ್ತಿದ್ದು, ಮೈಕ್ರೋ ಕಂಟೇನ್ಮೆಂಟ್ ವಲಯಗಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.
ನೈಟ್ ಕರ್ಫ್ಯೂ ಅಲ್ಲ ಇದು ಕೊರೊನಾ ಕರ್ಫ್ಯೂ
ನೈಟ್ ಕರ್ಫ್ಯೂ ಬಗ್ಗೆ ಇದೀಗ ಕೆಲವರು ವ್ಯಂಗ್ಯವಾಡುತ್ತಿರುವ ಕಾರಣ ಇದಕ್ಕೆ ನೈಟ್ ಕರ್ಫ್ಯೂ ಬದಲು ಕೊರೊನಾ ಕರ್ಫ್ಯೂ ಎಂದು ಕರೆಯೋಣ ಎಂದ ನಮೋ, ಕೊರೊನಾ ಕರ್ಫ್ಯೂ ಎಂದಾಗ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬಹುದು ಎಂದರು.
ಮೈಕ್ರೋ ಕಂಟೇನ್ಮೆಂಟ್ ವಲಯದ ಬಗ್ಗೆ ಜಾಗೃತಿ
ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡಲು ಮೈಕ್ರೋ ಕಂಟೇನ್ಮೆಂಟ್ ಗುರುತಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಮೋ ಸೂಚನೆ ನೀಡಿದರು. ಇದರಿಂದ ಯಶಸ್ವಿಯಾಗಿ ಮಹಾಮಾರಿ ಹೊಡೆದು ಓಡಿಸಬಹುದಾಗಿದೆ. ಈ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ಇತ್ತು. ಕ್ರಮೇಣವಾಗಿ ಕಡಿಮೆಯಾಗಿಲಿಲ್ವಾ ಎಂದು ತಿಳಿಸಿದ್ರು.