ನವದೆಹಲಿ/ಹೈದರಾಬಾದ್:ಇಂಗ್ಲಿಷ್/ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ತೆಲುಗು ಮಹಿಳೆಯ ಸೀಟು ಬದಲಾಯಿಸಿದ ಇಂಡಿಗೋ ವಿಮಾನ ಸಿಬ್ಬಂದಿಯ ನಡೆಗೆ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಜಯವಾಡ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ (6E7297 ವಿಮಾನ) ತುರ್ತು ನಿರ್ಗಮನದ ಸಾಲಿನಲ್ಲಿ ಕುಳಿತಿದ್ದ ತೆಲುಗು ಮಹಿಳೆಯೊಬ್ಬರಿಗೆ ಇಂಗ್ಲಿಷ್ ಬಾರದ ಕಾರಣ ಸೀಟು ಬದಲಾಯಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 16ರಂದು ಐಐಎಂ ಅಹಮದಾಬಾದ್‌ನ ಸಹಾಯಕ ಪ್ರಾಧ್ಯಾಪಕಿ ದೇವಸ್ಮಿತಾ ಎಂಬುವವರು ವಿಜಯವಾಡದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದ ಘಟನೆಯ ಕುರಿತು ಟ್ವೀಟ್ ಮಾಡಿದ್ದರು. ಅಂದು ತೆಲುಗು ಮಹಿಳೆಯೊಬ್ಬರು ವಿಜಯವಾಡದಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಆಕೆ 2A (XL ಸೀಟ್, ಎಕ್ಸಿಟ್ ರೋ) ನಲ್ಲಿ ಕುಳಿತಿದ್ದರು. ಮಹಿಳೆಗೆ ಹಿಂದಿ/ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ಸಿಬ್ಬಂದಿಗೆ ತಿಳಿದು ಆಕೆಯನ್ನು 3C ಸೀಟಿಗೆ ಬದಲಾಯಿಸಿದರು. ಈ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ತಿಳಿಸಿದ್ದರು.