ಪುರಿ (ಒಡಿಶಾ):ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ಇಂದು ಜನಸಾಗರವೇ ಹರಿದು ಬಂದಿದೆ. ಇದರಿಂದ ದೇಗುಲದಲ್ಲಿ ಇಂದು ಬೆಳಗ್ಗೆ ನೂಕುನುಗ್ಗಲು ಹಾಗೂ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು 20 ಭಕ್ತರು ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ಕಾರಣ ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಕಾರ್ತಿಕ ಮಾಸವು ಪುರಿ ಜಗನ್ನಾಥನ ದರ್ಶನಕ್ಕೆ ಪವಿತ್ರ ಎಂದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ದೇಗುಲದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ. ಇಂದು ಬೆಳಗ್ಗೆ ಸಂಭವಿಸಿದ ಘಟನೆಗೆ ಭಕ್ತರ ಭಾರಿ ನೂಕುನುಗ್ಗಲು ಕಾರಣ ಎಂದು ಶ್ರೀಜಗನ್ನಾಥ ದೇವಸ್ಥಾನದ ಆಡಳಿತದ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ರಂಜನ್ ಕುಮಾರ್ ದಾಸ್ ತಿಳಿಸಿದ್ದಾರೆ.
ನೂಕುನುಗ್ಗಲು ಪರಿಸ್ಥಿತಿಯಿಂದಾಗಿ ಕನಿಷ್ಠ 20 ಭಕ್ತರು ಗಾಯಗೊಂಡಿದ್ದಾರೆ. ಇವರಲ್ಲಿ 10 ಮಂದಿ ದೇವಸ್ಥಾನದಲ್ಲಿ ಮಂಗಳ ಆರತಿಯ ನಂತರ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಅಸ್ವಸ್ಥಕ್ಕೆ ಒಳಗಾದವರು ಹೆಚ್ಚಾಗಿ ಹಿರಿಯ ವಯಸ್ಸಿನವರಾಗಿದ್ದಾರೆ. ಭಕ್ತರ ದಂಡು ಒಳಗೆ ನುಗ್ಗಿದ್ದರಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅವರಿಗೆ ದೇವಸ್ಥಾನದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಪುರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮುಖ್ಯ ಆಡಳಿತಾಧಿಕಾರಿ ಮಾಹಿತಿ ನೀಡಿದ್ದಾರೆ.