ಚೆನ್ನೈ: ಅಗ್ನಿಪಥ್ ನೇಮಕಾತಿ ಯೋಜನೆ ವಿರೋಧಿಸಿ ನೂರಾರು ಸೇನಾ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಈ ಪ್ರಸ್ತಾಪದ ವಿರುದ್ಧ ಕಳವಳ ವ್ಯಕ್ತಪಡಿಸಿದರೆ, ರಾಜ್ಯಪಾಲ ಆರ್ ಎನ್ ರವಿ ಅವರು ಬೆಂಬಲ ಸೂಚಿಸಿದ್ದಾರೆ.
ಈ ಪ್ರಸ್ತಾಪವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ಆರೋಪಿಸಿದ್ದು, ಕೇಂದ್ರದಿಂದ ಮರು ಚಿಂತನೆಗೆ ಆಗ್ರಹ ಮಾಡಿದ್ದಾರೆ. ಆದರೆ ಯುವಕರು ಪ್ರತಿಕೂಲ ಅಂಶಗಳಿಂದ ದಾರಿತಪ್ಪಿಸಬಾರದು ಎಂದು ರವಿ ಈ ವೇಳೆ ಹೇಳಿದ್ದಾರೆ.
ಅಗ್ನಿಪಥ್ ವಿರುದ್ಧ ಯುವಕರಿಂದ ವ್ಯಾಪಕ ಪ್ರತಿಭಟನೆಗಳು ನಡೆದಿವೆ, ದೇಶದ ಬಗ್ಗೆ ಕಾಳಜಿ ಹೊಂದಿರುವ ಅನೇಕ ಮಾಜಿ ಸೇನಾ ಅಧಿಕಾರಿಗಳು ಅದನ್ನು ವಿರೋಧಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ರಾಜಕೀಯ ಪಕ್ಷಗಳ ಹೊರತಾಗಿ, ಹಲವು ವರ್ಷಗಳಿಂದ ರಾಷ್ಟ್ರೀಯ ಭದ್ರತೆಯಲ್ಲಿ ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳು ಆರ್ಮಿ ಕೆಲಸ ಅರೆಕಾಲಿಕ ಕೆಲಸವಲ್ಲ ಮತ್ತು ಇದು ಪಡೆಯ ಶಿಸ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಯೋಜನೆ ಅಪಾಯಕಾರಿ ಎಂದು ಹೇಳಿದ್ದಾರೆ ಎಂದು ಈ ವೇಳೆ ಉಲ್ಲೇಖಿಸಿದರು.