ಚೆನ್ನೈ( ತಮಿಳುನಾಡು):ಸಿಎಂ ಸ್ಟಾಲಿನ್ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಸರಣಿ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಸರ್ಕಾರದ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಇಂದು ನಗರ ಸಾರಿಗೆ ಬಸ್( ಎಂಟಿಎಸ್) ಪ್ರಯಾಣಿಸುವ ಮೂಲಕ ಪ್ರಯಾಣಿಕರ ಕಷ್ಟ ಕಾರ್ಪಣ್ಯವನ್ನು ಅರಿಯುವ ಪ್ರಯತ್ನ ಮಾಡಿದರು.
ಮಹಿಳಾ ಪ್ರಯಾಣಿಕರೊಂದಿಗೆ ಸಮಾಲೋಚನೆ:ರಾಧಾಕೃಷ್ಣನ್ ಸಲೈನಲ್ಲಿ ಬಸ್ ಸಂಖ್ಯೆ 29 ಸಿ ಯಲ್ಲಿ ಅವರು ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಮಹಿಳಾ ಪ್ರಯಾಣಿಕರೊಂದಿಗೆ ಮಾತನಾಡಿದರು. ಅವರಿಗೆ ಉಚಿತ ಪ್ರಯಾಣ ಸೌಲಭ್ಯದ ಬಗ್ಗೆ ವಿಚಾರಿಸಿದರು. ಮೊದಲ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅವರು ವಿಧಾನಸಭೆಯಲ್ಲಿಂದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆ ಘೋಷಣೆ ಮಾಡಿದರು. ಅದಷ್ಟೇ ಅಲ್ಲ ಇನ್ನೂ ಹಲವು ಕಾರ್ಯಕ್ರಮಗಳನ್ನು ಇದೇ ವೇಳೆ ಘೋಷಣೆ ಮಾಡಿದರು.
ಕರುಣಾನಿಧಿ ಸ್ಮಾರಕಕ್ಕೆ ಪುಷ್ಪನಮನ:ಚುನಾವಣೆ ಪೂರ್ವದಲ್ಲೇ ಡಿಎಂಕೆ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸಾರಿಗೆ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಸ್ಟಾಲಿನ್ ನೀಡಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಅವರು ಈ ಭರವಸೆಯನ್ನು ಈಡೇರಿಸಿದ್ದರು. ಇದೇ ವೇಳೆ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮರೀನಾ ಬೀಚ್ನಲ್ಲಿರುವ ದಿವಂಗತ ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ ಮತ್ತು ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದರು.