ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಹಲ್ಲೆ ಮಾಡಲಾಗಿದೆ ಎಂಬ ವದಂತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಖುದ್ದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರಾಜ್ಯದಲ್ಲಿ ವಲಸೆ ಕಾರ್ಮಿಕರ ಸುರಕ್ಷತೆ ಬಗ್ಗೆ ಖಾತರಿಪಡಿಸಿದ್ದಾರೆ. ಮತ್ತೊಂದೆಡೆ, ಸುಳ್ಳು ಸುದ್ದಿಯನ್ನು ಹಬ್ಬಿಸಿದ ಆರೋಪದ ಮೇಲೆ ಪತ್ರಿಕೆಯೊಂದರ ಸಂಪಾದಕ, ಇಬ್ಬರು ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ವಲಸೆ ಕಾರ್ಮಿಕರ ವಿಚಾರಗಾಗಿ ಬಿಹಾರ ಸಿಎಂ ಜೊತೆ ಮಾತನಾಡಿರುವ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸ್ಟಾಲಿನ್, ನಾನು ನನ್ನ ಸಹೋದರ ನಿತೀಶ್ ಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಈ ವಿಷಯದ ಬಗ್ಗೆ ಮಾತನಾಡಿದೆ. ನಮ್ಮ ರಾಜ್ಯದ ಬೆಳವಣಿಗೆಗೆ ಎಲ್ಲ ಕಾರ್ಮಿಕರು ನೆರವಾಗುತ್ತಿದ್ದಾರೆ. ಅವರು ಇಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಮತ್ತು ರಾಜ್ಯದ ಜನರು ಇತರ ರಾಜ್ಯಗಳ ಕಾರ್ಮಿಕರಿಗೆ ರಕ್ಷಣೆಯ ಗೋಡೆ ಕಟ್ಟುತ್ತಾರೆ ಎಂದು ಎಲ್ಲ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅಭಯ ನೀಡುತ್ತೇವೆ. ಆದ್ದರಿಂದ ನೀವು ಸುಳ್ಳು ಸುದ್ದಿಗಳಿಂದ ಯಾವುದೇ ಆತಂಕವನ್ನು ಹೊಂದುವ ಅಗತ್ಯವಿಲ್ಲ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಭಾರತದ ವಿರೋಧಿಗಳು - ಸಿಎಂ ಎಚ್ಚರಿಕೆ: ಒಂದು ವೇಳೆ, ಕೆಲ ಮಾಧ್ಯಮದವರು ಬೇರೆ ರಾಜ್ಯದಲ್ಲಿ ನಡೆದ ಘರ್ಷಣೆಯನ್ನು ತಮಿಳುನಾಡಿನಲ್ಲಿ ನಡೆದಿರುವಂತೆ ಬಿಂಬಿಸಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಇದೆಲ್ಲವೂ ಪ್ರಾರಂಭವಾಗಿದೆ. ಹೀಗಾಗಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ಮಾಧ್ಯಮ ನೀತಿಗೆ ಅನುಗುಣವಾಗಿ ಯಾವುದೇ ಸುದ್ದಿಗಳನ್ನು ಪೋಸ್ಟ್ ಮಾಡಬೇಕು. ಸತ್ಯಾಸತ್ಯತೆ ದೃಢೀಕರಿಸದ ಸುದ್ದಿಗಳಿಂದ ದೂರ ಇರಬೇಕು ಎಂದು ಮನವಿ ಮಾಡಿದ್ದಾರೆ.