ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳ ಶಾಲಾ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಸಚಿವ ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಾರ್ಥ ಚಟರ್ಜಿ ಅವರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದೇನೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಹಿಂದೆ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದ ಪಾರ್ಥ ಚಟರ್ಜಿ ಸದ್ಯ ದೀದಿ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿರುವ ಕಾರಣ ಪಕ್ಷದ ಹಾಗೂ ಸಚಿವಾಲಯದ ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗಿದೆ.
ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಬರೋಬ್ಬರಿ 21 ಕೋಟಿ ಹಣ ವಶಕ್ಕೆ ಪಡೆದುಕೊಂಡಿದ್ದ ಇಡಿ ಅಧಿಕಾರಿಗಳು ನಿನ್ನೆ ಮತ್ತೊಂದು ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಯ 27 ಕೋಟಿ ರೂ. ನಗದು ಹಾಗೂ 4 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದಲ್ಲಿ ಅವರ ಕೈವಾಡ ಇರುವುದು ಸಾಬೀತುಗೊಳ್ಳುತ್ತಿದ್ದಂತೆ ಪಾರ್ಥ ಚಟರ್ಜಿ ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬಂದಿತ್ತು.