ಶ್ರೀನಗರ(ಜಮ್ಮು ಕಾಶ್ಮೀರ):ಪೊಲೀಸ್ ಬಸ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಪೊಲೀಸ್ ಮಂಗಳವಾರ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಮೂಲಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು ಮೂರಕ್ಕೆ ಏರಿಕೆಯಾಗಿದೆ.
ಕಂಗನ್ ಪ್ರದೇಶದ ನಿವಾಸಿಯಾದ ಕಾನ್‌ಸ್ಟೇಬಲ್ ರಮೀಜ್ ಅಹ್ಮದ್ ಸೇನಾ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ. ದಾಳಿ ನಡೆದ ದಿನ ಎಎಸ್‌ಐ ಗುಲಾಮ್ ಹಸನ್ ಮತ್ತು ಹಿರಿಯ ಕಾನ್ಸ್‌ಟೇಬಲ್ ಶಫೀಕ್ ಅಲಿ ಹುತಾತ್ಮರಾಗಿದ್ದು, ಈಗ ರಮೀಜ್ ಅಹ್ಮದ್ ಕೂಡಾ ಮೃತಪಟ್ಟಿದ್ದಾರೆ.
ಶ್ರೀನಗರದ ಪಂಥಾ ಚೌಕ್‌ನ ಝೆವಾನ್ ಪ್ರದೇಶದಲ್ಲಿ ಸಶಸ್ತ್ರ ಮೀಸಲು ಪೊಲೀಸ್ (ಎಆರ್‌ಪಿ) 9ನೇ ಬೆಟಾಲಿಯನ್‌ನ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಉಗ್ರರು ದಾಳಿ ನಡೆಸಿದ್ದರು. 11 ಮಂದಿ ಗಾಯಗೊಂಡು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.