ಹೈದರಾಬಾದ್: ಸಮಾಜ ಸುಧಾರಕ ಹಾಗೂ 11ನೇ ಶತಮಾನದ ಸಂತ ಎನಿಸಿಕೊಂಡಿರುವ ರಾಮಾನುಜಾಚಾರ್ಯರ 1000 ನೇ ಜಯಂತಿ ನಿಮಿತ್ತ 216 ಅಡಿಯ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಚಿನ್ನ ಜೀಯಾರ್ ಸ್ವಾಮಿ ಅವರಿಂದ ನಿರ್ವಹಿಸಲ್ಪಡುವ ಈ ಚಿನ್ನ ಜೀಯರ್ ಆಶ್ರಮವು ವೈಷ್ಣವ ಧರ್ಮದ ತತ್ತ್ವ ಸಾರುವ ಕೆಲಸ ಮಾಡುತ್ತಿದೆ. ಶ್ರೀ ರಾಮಾನುಜರು ಪ್ರತಿ ಪಾದಿಸಿದ್ದ ವಿಶಿಷ್ಟಾದ್ವೈತ ಸಿದ್ಧಂತಾದ ಕುರಿತು ಜನರಿಗೆ ಅರಿವು ಮೂಡಿಸುತ್ತಿದೆ.
ಸಮಾನತೆಯ ಪ್ರತಿಮೆ : ಒಂದು ಸಾವಿರ ವರ್ಷಗಳ ಹಿಂದೆ ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಮಹಾನ್ ಸಮಾಜ ಸುಧಾರಕನಿಗೆ ಗೌರವ ಸಲ್ಲಿಸಿಸುವ ಉದ್ದೇಶದಿಂದ ಕುಳಿತ ಭಂಗಿಯಲ್ಲಿರುವ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಚಿಂತಲ್ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.
ಇದಕ್ಕೆ ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಭೇದ ಇಲ್ಲದೇ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.
108 ಮಾದರಿ ದೇವಾಲಯಗಳ ನಿರ್ಮಾಣ: ಮುಚಿಂತಲ್ ಆಶ್ರಮಕ್ಕೆ ತೆರಳುವ ಮಾರ್ಗದಲ್ಲಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯು ದೂರದಿಂದಲೇ ನೋಡುಗರನ್ನು ಅಕರ್ಷಿಸುತ್ತದೆ. ಪದ್ಮಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ರಾಮಾನುಜರ ಪ್ರತಿಮೆ ಭಕ್ತಿ ಮತ್ತು ಶಾಂತತೆಯ ಭಾವವನ್ನು ಮೂಡಿಸುತ್ತಿದೆ.
ರಾಮಾನುಜರು ಎಲ್ಲರೂ ಸಮಾನರು ಎಂದು ಬೋಧಿಸುತ್ತಿರುವಂತೆ ಪ್ರತಿಮೆ ಕಂಡು ಬರುತ್ತದೆ. ಪ್ರತಿಮೆಯ ಜೊತೆಗೆ 108 ಮಾದರಿ ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ. ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ, ಹೈದರಾಬಾದ್ನ ಹೊರವಲಯದಲ್ಲಿ ಇರುವ ಶಂಶಾಬಾದ್ನ ಮುಚಿಂತಲ್ ಎಂಬಲ್ಲಿ ನಿರ್ಮಿಸಲಾಗಿದೆ.
ಫೆಬ್ರವರಿ 5 ರಂದು ಪ್ರತಿಮೆ ಅನಾವರಣ: ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್ನ ಶಂಶಾಬಾದ್ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ಇಲ್ಲಿ ಕಾರ್ಯಕ್ರಮಗಳು ನಡೆಯಲಿವೆ.