ನರಸಿಪಟ್ಣಂ: ಇಲ್ಲಿಗೆ ಹತ್ತಿರದ ಚಿಂತಪಲ್ಲಿ ಅರಣ್ಯದಲ್ಲಿ ರಾಮ ಲಕ್ಷ್ಮಣ ಹೆಸರಿನ ಪುರಾತನ ಮರಗಳಿರುವುದು ವಿಶೇಷವಾಗಿದೆ. ಆದರೆ ಬುಡಕಟ್ಟು ಜನರ ನಂಬಿಕೆಯನ್ನು ಮೀರಿ ಈ ಹಳೆಯ ಸಾಗುವಾನಿ (ತೇಗು) ಮರಗಳನ್ನು ಕಡಿಯುವುದು ಹೇಗೆ ಎಂಬ ಚಿಂತೆ ಇಲ್ಲಿನ ಅರಣ್ಯ ಇಲಾಖೆಗೆ ಶುರುವಾಗಿದೆ. 195 ವರ್ಷ ವಯಸ್ಸಿನ ಎರಡು ಸಾಗುವಾನಿ ಮರಗಳು ಒಂದರ ಪಕ್ಕ ಒಂದು ಬೆಳೆದು ನಿಂತಿವೆ. ಇವುಗಳನ್ನು ಬುಡಕಟ್ಟು ಜನತೆ ಸಾಕ್ಷಾತ್ ರಾಮ ಲಕ್ಷ್ಮಣ ಎಂದೇ ನಂಬುತ್ತಾರೆ. ಆದರೆ, ಇದರಲ್ಲಿ ರಾಮ ಎಂದು ಕರೆಯಲಾಗುವ ಮರ ತುಂಬಾ ಹಳೆಯದಾಗಿ ಶಿಥಿಲವಾಗಿದೆ. ಆದರೆ ಈ ಮರ ಬುಡಕಟ್ಟು ಜನರ ನಂಬುಗೆಯ ಭಾಗವಾಗಿರುವುದರಿಂದ ಮುಂದೇನು ಮಾಡುವುದು ಎಂಬ ಚಿಂತೆ ಅರಣ್ಯ ಇಲಾಖೆಗೆ ಶುರುವಾಗಿದೆ.
1828 ರಲ್ಲಿ ಆಗಿನ ಮುನ್ಸಿಫ್ ರಂಜಮ್ ದೋರಾ ಎಂಬುವರು ಎರಡು ಸಾಗುವಾನಿ ಬೀಜಗಳನ್ನು ತಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಕೊಯ್ಯೂರ ಮಂಡಲದ ಮರ್ರಿಪಾಕಲ ಅರಣ್ಯದಲ್ಲಿ ನೆಟ್ಟಿದ್ದರು. ಈ ವಿಚಾರ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ದಾಖಲಾಗಿದೆ. ಮರ್ರಿಪಾಕಲ, ಪಾಲ ಸಮುದ್ರ, ನೀಲಾವರಂ, ಗಂಗವರಂ, ಎರ್ರಗೆಡ್ಡ ಮೊದಲಾದ ಗ್ರಾಮಗಳ ಗ್ರಾಮಸ್ಥರು ಈ ಮರಗಳನ್ನು ರಾಮ ಲಕ್ಷ್ಮಣರೆಂದು ಪೂಜಿಸುತ್ತಾರೆ. ಇಲ್ಲಿ ಪ್ರತಿ ಶ್ರೀರಾಮ ನವಮಿಗೆ ವಿಶೇಷ ಪೂಜೆ ನಡೆಯುತ್ತದೆ. ಮನೆಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆದರೂ ಇಲ್ಲಿಗೆ ಬಂದು ತಮ್ಮ ಮನೆಯ ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ಪ್ರಾರ್ಥಿಸುತ್ತಾರೆ.
ಸಾಮಾನ್ಯವಾಗಿ ತೇಗದ ಮರಕ್ಕೆ ಐವತ್ತು ಅರವತ್ತು ವರ್ಷ ವಯಸ್ಸಾದಾಗ ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಮರದ ಡಿಪೋಗಳಿಗೆ ಸಾಗಿಸಿ ಹರಾಜು ಹಾಕುತ್ತಾರೆ. ಆದರೆ ಆದಿವಾಸಿಗಳು ಈ ಮರಗಳನ್ನು ಪೂಜಿಸುತ್ತಿರುವುದರಿಂದ ಅವರು ಅವುಗಳನ್ನು ಕತ್ತರಿಸಿಲ್ಲ. ಈ ಮರಗಳನ್ನು ಆಂಧ್ರಪ್ರದೇಶ ನಗರ ಹಸಿರೀಕರಣ ಮತ್ತು ಸುಂದರೀಕರಣ ನಿಗಮ-2017 ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಮತ್ತು ವಿಶೇಷ ತೀರ್ಪುಗಾರರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವುಗಳಿಗೆ ಶೀಲ್ಡ್ ಮತ್ತು ಪ್ರಶಂಸಾ ಪತ್ರವನ್ನು ಸಹ ನೀಡಲಾಗಿದೆ. ಆದಿವಾಸಿಗಳು ಮರಗಳನ್ನು ದೇವರಂತೆ ಪೂಜಿಸುವುದು ಇಲ್ಲಿನ ವಿಶೇಷ. ಹತ್ತಿರದಲ್ಲಿ ಇನ್ನೂ ಎರಡು ತೇಗದ ಮರಗಳಿವೆ. ಅವರನ್ನು ಸೀತಾದೇವಿ ಮತ್ತು ಆಂಜನೇಯಸ್ವಾಮಿ ಎಂದು ಪರಿಗಣಿಸಲಾಗುತ್ತದೆ.