ಕೊಲೊಂಬೋ(ಶ್ರೀಲಂಕಾ) :ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ. ಆದರೆ, ಸಂಸತ್ತಿನಲ್ಲಿ 113 ಸ್ಥಾನಗಳ ಬಹುಮತಗಳನ್ನು ಸಾಬೀತುಪಡಿಸುವವರಿಗೆ ಸರ್ಕಾರವನ್ನು ಹಸ್ತಾಂತರಿಸಲು ಸಿದ್ಧವಾಗಿದ್ದೇನೆ ಎಂದು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಪಕ್ಷದ ಹಿರಿಯ ಸದಸ್ಯರಿಗೆ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದಿನನಿತ್ಯದ ಅಗತ್ಯವಸ್ತುಗಳ ಕೊರತೆ ಎದುರಾಗಿದ್ದು, ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿರುವ ಮಧ್ಯೆಯೇ ಅಧ್ಯಕ್ಷ ರಾಜಪಕ್ಸ ಸೋಮವಾರ ರಾಜಕೀಯ ಸಭೆ ನಡೆಸಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.
ಪ್ರತಿಭಟನೆ ಪ್ರಾರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಸಭೆ ಕರೆಯಲಾಗಿದ್ದು, ಸ್ಪೀಕರ್ ಮಹಿಂದಾ ಯಾಪಾ ಅಬೈವಾರ್ಡೆನ ಅಧ್ಯಕ್ಷತೆಯಲ್ಲಿ ಯಾವ ಪಕ್ಷ 225 ವಿಧಾನಸಭಾ ಸ್ಥಾನಗಳ ಪೈಕಿ 113 ಸ್ಥಾನಗಳೊಂದಿಗೆ ಬಹುಮತ ಸಾಧಿಸುತ್ತದೆ ಎಂಬುದನ್ನು ನಿರ್ಧರಿಸಲು ಚುನಾವಣೆ ನಡೆಸಲಾಯಿತು.
ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸಾರ್ವಜನಿಕರ ಆಕ್ರೋಶವನ್ನು ಕಂಡು ಭಾನುವಾರ 26 ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷ ರಾಜಪಕ್ಸ ವಿರೋಧ ಪಕ್ಷದವರನ್ನು ಸಂಪುಟ ಸೇರುವಂತೆ, ಎಲ್ಲರು ಒಟ್ಟುಗೂಡಿ ಈಗ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸುವ ಎಂದು ಕೇಳಿಕೊಂಡಿದ್ದರು.