ನವದೆಹಲಿ :ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ದೆಹಲಿಗೆ ಆಗಮಿಸಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ವಿ ಮುರಳೀಧರನ್ ಅವರು ವಿಮಾನ ನಿಲ್ದಾಣದಲ್ಲಿ ವಿಕ್ರಮಸಿಂಘೆ ಅವರನ್ನು ಸ್ವಾಗತಿಸಿದರು. ಕಲಾವಿದರು ವಿಮಾನ ನಿಲ್ದಾಣದಲ್ಲಿ ಗರ್ಬಾ ನೃತ್ಯ ಪ್ರದರ್ಶಿಸಿ ಶ್ರೀಲಂಕಾ ಅಧ್ಯಕ್ಷರನ್ನು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ವಿಕ್ರಮಸಿಂಘೆ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.
ವಿಕ್ರಮಸಿಂಘೆ ಅವರ ಭೇಟಿಯು ಭಾರತ ಮತ್ತು ಶ್ರೀಲಂಕಾ ನಡುವಿನ ಬಹು ದೀರ್ಘಕಾಲದ ಬಾಂಧವ್ಯ ಮತ್ತಷ್ಟು ಹೆಚ್ಚಿಸಲಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ವಿಕ್ರಮಸಿಂಘೆ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.
ತಮ್ಮ ಭೇಟಿಯ ಸಮಯದಲ್ಲಿ, ಅಧ್ಯಕ್ಷ ವಿಕ್ರಮಸಿಂಘೆ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಭಾರತೀಯ ಗಣ್ಯರೊಂದಿಗೆ ಪರಸ್ಪರ ಹಿತಾಸಕ್ತಿಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ನೆರೆಹೊರೆಯವರು ಮೊದಲು ಎಂಬ ಭಾರತದ ನೀತಿ ಮತ್ತು ವಿಷನ್ ಸಾಗರ ಯೋಜನೆಯಲ್ಲಿ ಶ್ರೀಲಂಕಾ ಪ್ರಮುಖ ಪಾಲುದಾರನಾಗಿದೆ. ಈ ಭೇಟಿ ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ವರ್ಧಿತ ಸಂಪರ್ಕ ಮತ್ತು ವಲಯಗಳಾದ್ಯಂತ ಪರಸ್ಪರ ಲಾಭದಾಯಕ ಸಹಕಾರಕ್ಕಾಗಿ ಮಾರ್ಗಗಳನ್ನು ಅನ್ವೇಷಿಸುತ್ತದೆ." ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.