ತಿರುವನಂತಪುರಂ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆ ವಿಮಾನಯಾನ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿದೆ. ಹೀಗಾಗಿ ತಿರುವನಂತಪುರಂ ಮತ್ತು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಶ್ರೀಲಂಕಾದ ವಿಮಾನಯಾನ ಉದ್ಯಮಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಕೊಲಂಬೊಗೆ ಹತ್ತಿರವಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿರುವ ತಿರುವನಂತಪುರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಅಲ್ಲಿಂದ ಇತರ ದೇಶಗಳಿಗೆ ತೆರಳುವ ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಮತ್ತು ಇಂಧನ ತುಂಬಲು ಸಹಾಯ ಮಾಡುತ್ತಿವೆ.
ಇಲ್ಲಿಯವರೆಗೆ ಒಟ್ಟು 90 ವಿಮಾನಗಳು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿವೆ. ಶ್ರೀಲಂಕಾ ಏರ್ಲೈನ್ಸ್ನ 61 ವಿಮಾನಗಳು ಮತ್ತು ಇಂಟರ್ನ್ಯಾಷನಲ್ ಏರ್ಲೈನ್ನ 29 ವಿಮಾನಗಳು ಇಂಧನ ತುಂಬಿಸಿಕೊಂಡಿವೆ. ಶ್ರೀಲಂಕಾ ಏರ್‌ಲೈನ್ಸ್ ವಿಮಾನಗಳು ಕೊಲಂಬೊದಿಂದ ಫ್ರಾಂಕ್‌ಫರ್ಟ್, ಪ್ಯಾರಿಸ್ ಮತ್ತು ಮೆಲ್ಬೋರ್ನ್ ಗೆ ತೆರಳುವ ವಿಮಾನಗಳು ತಿರುವನಂತಪುರಂನಲ್ಲಿ ಇಂಧನ ತುಂಬಿಸುತ್ತಿವೆ. ಅಷ್ಟೇ ಅಲ್ಲದೇ ಫ್ಲೈ ದುಬೈ, ಏರ್ ಅರೇಬಿಯಾ, ಗಲ್ಫ್ ಏರ್ ಮತ್ತು ಓಮನ್ ಏರ್ ವಿಮಾನಗಳು ತಿರುವನಂತಪುರಂನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿವೆ.
ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲು ಮತ್ತು ತಾಂತ್ರಿಕ ಲ್ಯಾಂಡಿಂಗ್‌ಗೆ 1 ಲಕ್ಷ ರೂ. ಪಡೆಯಲಾಗುತ್ತದೆ. ಆದ್ರೆ ಬಿಕ್ಕಟ್ಟಿನಲ್ಲಿರುವ ನಮ್ಮ ನೆರೆಯ ರಾಷ್ಟ್ರಕ್ಕೆ ಸಹಾಯವನ್ನು ಮಾಡಲು ಯಾವುದೇ ಹಣ ಪಡೆಯಲಾಗುತ್ತಿಲ್ಲ ಎಂದು ಅದಾನಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನ ನಿಲ್ದಾಣಗಳಲ್ಲಿ ಇಂಧನ ತುಂಬುವ ವೆಚ್ಚದಿಂದ ಕೇರಳ ರಾಜ್ಯ ಸರ್ಕಾರವು ಐದು ಪ್ರತಿಶತ ತೆರಿಗೆಯನ್ನು ಗಳಿಸುತ್ತದೆ.