ಚೆನ್ನೈ (ತಮಿಳುನಾಡು):ನಕಲಿ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ಬಳಸಿ ತಮಿಳುನಾಡಿನ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೀಲಂಕಾದ ಒಂದೇ ಕುಟುಂಬದ ನಾಲ್ವರನ್ನು ಬಂಧಿಸಲಾಗಿದೆ. ಪತಿ, ಪತ್ನಿ ಹಾಗೂ ಇವರ ಮಗ ಮತ್ತು ಮಗಳನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕುಟುಂಬವು ಭಾರತದ ನಕಲಿ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಇತರ ಪ್ರಮುಖ ದಾಖಲೆಗಳ ಮೇಲೆ ಭಾರತದಲ್ಲಿ ವಾಸಿಸುತ್ತಿದೆ ಎಂದು ಆರೋಪಿಸಲಾಗಿದೆ.
ಶ್ರೀಲಂಕಾದ ಕೊಲಂಬೊ ಮೂಲದ ರಮಲನ್ ಸಲಾಂ (33) ಎಂಬಾತ ತಮ್ಮ ಸಮೇತವಾಗಿ ಗುರುವಾರ ಬೆಳಗ್ಗೆ 10.45ಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಕೂಡಲೇ ರಮಲಾನ್ ಮತ್ತು ಅವರ ಪತ್ನಿ, ಮಗ ಮತ್ತು ಮಗಳನ್ನು ವಲಸೆ ಅಧಿಕಾರಿಗಳು ತಡೆದಿದ್ದಾರೆ. ಈ ಕುಟುಂಬದ ಪ್ರಯಾಣದ ದಾಖಲೆಗಳನ್ನು ಪರಿಶೀಲಿಸಿದಾಗ ನಾಲ್ವರು ಸಹ ನಕಲಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತೆಯೇ, ರಮಲನ್ ಮತ್ತು ಕುಟುಂಬ ಸದಸ್ಯರನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ನಿರಂತರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆಯಲ್ಲಿ ರಾಮಲನ್ 2011ರಲ್ಲಿ ಶ್ರೀಲಂಕಾದಿಂದ ನಿರಾಶ್ರಿತರಾಗಿ ತಮಿಳುನಾಡಿಗೆ ಬಂದಿದ್ದರು. ತಮಿಳುನಾಡು ರಾಜಧಾನಿ ಚೆನ್ನೈನ ವಂಡಲೂರ್ ಪ್ರದೇಶದಲ್ಲಿ ಭಾರತೀಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರ ಪ್ರಮುಖ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.