ಕರ್ನಾಟಕ

karnataka

ETV Bharat / bharat

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು : ರಾಯಭಾರಿ ನಿರುಪಮಾ ರಾವ್ ಈ ಬಗ್ಗೆ ಹೇಳೋದೇನು? - SRI LANKAN ECONOMIC CRISIS INDIA BETTER BE VIGILANT

ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಶ್ರೀಲಂಕಾದ ರಾಯಭಾರಿ ನಿರುಪಮಾ ರಾವ್ ಅವರು ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದ ಸಂಪೂರ್ಣ ಮಾಹಿತಿ ಇಲ್ಲಿದೆ..

ನಿರುಪಮಾ ರಾವ್
ನಿರುಪಮಾ ರಾವ್

By

Published : May 16, 2022, 5:05 PM IST

ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಭಾರತದ ಮೇಲೆ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ. ಸಂಕಷ್ಟದಿಂದ ಪಾರಾಗಲು ಇನ್ನಷ್ಟು ಲಂಕಾದವರು ತಮಿಳುನಾಡಿಗೆ ಬರುವ ಸಾಧ್ಯತೆ ಇದೆ. ಭಯೋತ್ಪಾದನೆ ಮತ್ತು ಹಿಂಸಾಚಾರ ಮರುಕಳಿಸಬಹುದೆಂಬ ಎಚ್ಚರಿಕೆಗಳನ್ನು ನಾವು ಇಲ್ಲಿ ನಿರ್ಲಕ್ಷಿಸಲಾಗುವುದಿಲ್ಲ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಮ್ಮ ಭದ್ರತಾ ಏಜೆನ್ಸಿಗಳು ಜಾಗರೂಕರಾಗಿರಬೇಕು ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಶ್ರೀಲಂಕಾದ ರಾಯಭಾರಿ ನಿರುಪಮಾ ರಾವ್ ಹೇಳಿದ್ದಾರೆ. ನಿರುಪಮಾ ರಾವ್​ ಅವರು ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನವನ್ನು ಸಹ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಕಾರಣವೇನು?

ಶ್ರೀಲಂಕಾದಲ್ಲಿ ಪರಿಸ್ಥಿತಿಗಳು ಉಲ್ಬಣಗೊಂಡಿವೆ ಮತ್ತು ಮಾರ್ಚ್‌ನಿಂದ ಜನರು ರಾಜಪಕ್ಸೆ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಹಲವು ವರ್ಷಗಳ ಹಿಂದೆಯೇ ಈ ಬಿಕ್ಕಟ್ಟು ಉದ್ಭವಿಸಿದೆ. ಉತ್ಪನ್ನ-ಆಧಾರಿತ ಆರ್ಥಿಕತೆಯು ಹೊಸ ಕೈಗಾರಿಕೆಗಳು ಮತ್ತು ಡಿಜಿಟಲ್ ಸೇವೆಗಳಿಗೆ ಮುಂದಾಗಿಲ್ಲ. ದಕ್ಷಿಣ ಏಷ್ಯಾದಲ್ಲಿ ಶ್ರೀಲಂಕಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ, ಇದು ಪ್ರವಾಸೋದ್ಯಮ, ಗಲ್ಫ್ ಉದ್ಯೋಗಿಗಳು ಇತ್ಯಾದಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯು ಚಹಾ ಮತ್ತು ಉಡುಪುಗಳ ರಫ್ತಿನ ಮೇಲೆ ಪರಿಣಾಮ ಬೀರಿದೆ. ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ 2019ರಲ್ಲಿ ಈಸ್ಟರ್‌ನಲ್ಲಿ ISIS ಬಾಂಬ್ ದಾಳಿಗಳು ಮತ್ತು ನಂತರದ ಕೋವಿಡ್-19 ಸಾಂಕ್ರಾಮಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಿದೆ. ತೆರಿಗೆ ಕಡಿತ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಆಮದು ನಿಷೇಧ ಪರಿಣಾಮವಾಗಿ ಕಡಿಮೆ ಇಳುವರಿ ಮುಂತಾದ ಸರ್ಕಾರದ ನಿರ್ಧಾರಗಳು ಈ ಪರಿಸ್ಥಿತಿಗೆ ಕಾರಣವಾಗಿವೆ ಎಂದರು.

ಈ ಬೆಳವಣಿಗೆ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಶ್ರೀಲಂಕಾ ನಮಗೆ ನ್ಯಾವಿಗೇಷನ್ ಮತ್ತು ವಾಣಿಜ್ಯ ಉದ್ದೇಶಗಳಿಗೆ ಪ್ರಮುಖ ದೇಶವಾಗಿದೆ. ಅಲ್ಲಿನ ಅಸ್ಥಿರತೆ ನಮ್ಮ ದೇಶದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ತಮಿಳುನಾಡು ಸಾವಿರ ಕಿಲೋಮೀಟರ್‌ಗಳಷ್ಟು ಕರಾವಳಿಯನ್ನು ಹೊಂದಿದೆ. ಇದು ನೇರವಾಗಿ ಶ್ರೀಲಂಕಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಪರಿಸ್ಥಿತಿ ಹದಗೆಟ್ಟರೆ ಅನೇಕ ನಿರಾಶ್ರಿತರು ಇಲ್ಲಿಗೆ ವಲಸೆ ಬರಬಹುದು. ಆಹಾರದ ಕೊರತೆಯಿಂದ ಬಡವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ. ಎಲ್‌ಟಿಟಿಇಯೊಂದಿಗೆ ಸಂಪರ್ಕ ಹೊಂದಿರುವ ಪ್ರತ್ಯೇಕತಾವಾದಿಗಳು ಒಂದು ಗುಂಪಾಗಿ ಮತ್ತೆ ಒಂದಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ಇತ್ತೀಚಿನ ಕೆಲವು ವರದಿಗಳಿವೆ. ಅದು ನಿಜವಾದರೆ ಶ್ರೀಲಂಕಾದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಮತ್ತೆ ತಲೆ ಎತ್ತುವ ಸಾಧ್ಯತೆ ಇದೆ. ಸಿಂಹಳೀಯರು ಮತ್ತು ತಮಿಳರ ನಡುವಿನ ಘರ್ಷಣೆಗಳು ಉಲ್ಬಣಗೊಳ್ಳಬಹುದು. ಈ ಪರಿಣಾಮಗಳ ಬಗ್ಗೆ ಭಾರತ ಯೋಚಿಸಬೇಕಾಗಿದೆ.

ಚೀನಾ ಈ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತದೆಯೇ?

ಶ್ರೀಲಂಕಾ ರಾಜಕೀಯವನ್ನು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ಆದರೆ, ಅಲ್ಲಿ ಈಗಾಗಲೇ ಸಕ್ರಿಯವಾಗಿರುವ ಮತ್ತು ಉತ್ತಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾದಂತಹ ದೇಶಗಳ ಚಟುವಟಿಕೆಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಶ್ರೀಲಂಕಾದ ವಿದೇಶಿ ಸಾಲದ 10 ಪ್ರತಿಶತವನ್ನು ಚೀನಾ ಹೊಂದಿವೆ. ಚೀನಾದ ಯೋಜನೆಗಳು ವಿಶೇಷವಾಗಿ ಹಂಬಂಟೋಟಾ ಬಂದರಿನ ಅಭಿವೃದ್ಧಿ ಮತ್ತು ಮಟ್ಟಾಲಾ ವಿಮಾನ ನಿಲ್ದಾಣದ ಅಭಿವೃದ್ಧಿ, ರಾಜಪಕ್ಸೆಗಳಿಗೆ ಬಹಳ ಮುಖ್ಯವಾದುದಾದರೂ ಜನರಿಗೆ ಮತ್ತು ಆರ್ಥಿಕತೆಗೆ ಪ್ರಯೋಜನವು ಅತ್ಯಲ್ಪವಾಗಿದೆ.

ಹಂಬಂಟೋಟಾ ಬಂದರನ್ನು ಚೀನಾಕ್ಕೆ 99 ವರ್ಷಗಳ ಗುತ್ತಿಗೆ ನೀಡಿರುವುದು ದೇಶದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದು ಶ್ರೀಲಂಕಾದವರು ಪ್ರತಿಭಟಿಸಿದ್ದಾರೆ. ಚೀನಾದ ಹೂಡಿಕೆ ಮತ್ತು ಕೊಲಂಬೊ ಪೋರ್ಟ್ ಸಿಟಿ ಯೋಜನೆಯ ಮಾಲೀಕತ್ವದ ವಿಷಯದಲ್ಲಿ ಸರ್ಕಾರವು ಉತ್ತರಿಸಲಾಗದ ಸಾಕಷ್ಟು ಪ್ರಶ್ನೆಗಳಿವೆ.

ದ್ವೀಪ ರಾಷ್ಟ್ರವನ್ನು ಬೆಂಬಲಿಸಲು ಅನೇಕ ದೇಶಗಳು ಏಕೆ ಮುಂದೆ ಬರುತ್ತಿಲ್ಲ?

ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ರನಿಲ್ ವಿಕ್ರಮಸಿಂಘೆ ಅವರ ನೇಮಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಾಗತಿಸಲಾಗಿದೆ. ಅನೇಕ ದೇಶಗಳು, ವಿಶೇಷವಾಗಿ ಇಂಡೋ-ಪೆಸಿಫಿಕ್, ಯುನೈಟೆಡ್ ಸ್ಟೇಟ್ಸ್, ಜಪಾನ್ ಈ ಬೆಳವಣಿಗೆಯನ್ನು ಶ್ಲಾಘಿಸಿವೆ. ಈ ದೇಶಗಳು ಶ್ರೀಲಂಕಾದಲ್ಲಿ ಸ್ಥಿರತೆಯನ್ನು ಬಯಸುತ್ತವೆ. ಬಿಕ್ಕಟ್ಟಿಗೆ ಭಾರತವೇ ಮೊದಲು ಸ್ಪಂದಿಸಿದೆ. ನಾವು $3 ಬಿಲಿಯನ್ ಮೌಲ್ಯದ ಇಂಧನ, ಆಹಾರ ಮತ್ತು ಔಷಧಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ನಂತರ ನಾವು $2 ಶತಕೋಟಿಯವರೆಗಿನ ಹಣಕಾಸಿನ ನೆರವು ನೀಡಲು ಸಿದ್ಧರಿದ್ದೇವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಲಂಕಾದ ಜನರಿಗೆ ತನ್ನ ಬೆಂಬಲ ಮತ್ತು ಸಹಾಯವನ್ನು ನೀಡುವುದನ್ನು ಮುಂದುವರಿಸುವುದಾಗಿ ಭಾರತ ಹೇಳಿದೆ.

ನೀವು ಶ್ರೀಲಂಕಾಕ್ಕೆ ಭಾರತೀಯ ಹೈಕಮಿಷನರ್ ಆಗಿ ಮತ್ತು ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೀರಿ. ದೇಶ ಮತ್ತು ಸರ್ಕಾರದ ಬಗ್ಗೆ ನಿಮ್ಮ ಅನಿಸಿಕೆ ಏನು?

ಶ್ರೀಲಂಕಾದ ಹೈಕಮಿಷನರ್ ಆಗಿ ಸೇವೆ ಸಲ್ಲಿಸುವ ಮೊದಲು, ನಾನು 1981-83ರವರೆಗೆ ಭಾರತೀಯ ಹೈಕಮಿಷನ್‌ನ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾವು ಶ್ರೀಲಂಕಾದೊಂದಿಗೆ ಭೌಗೋಳಿಕವಾಗಿ, ಐತಿಹಾಸಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಜನಾಂಗೀಯವಾಗಿ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೇವೆ. ಗಾಂಧೀಜಿ ಹೇಳಿದಂತೆ ಭಾರತ ಮತ್ತು ಶ್ರೀಲಂಕಾ ಘರ್ಷಣೆ ಅಸಾಧ್ಯ. ನಾವು ಒಂದು ಕುಟುಂಬ ಇದ್ದಂತೆ. ದ್ವೀಪ ರಾಷ್ಟ್ರವು ಸ್ಥಿರವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

ದೇಶದ ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ಏಕತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಶ್ರೀಲಂಕಾ ವ್ಯೂಹಾತ್ಮಕವಾಗಿ ಪ್ರಮುಖವಾಗಿದೆ. ಇದು ಭಾರತದಂತಹ ದೊಡ್ಡ ದೇಶದ ಗಡಿಯನ್ನು ಹೊಂದಿದೆ. ದೀರ್ಘಾವಧಿಯಲ್ಲಿ ಉಭಯ ದೇಶಗಳ ನಡುವಿನ ಮೂಲಸೌಕರ್ಯ ಏಕೀಕರಣವು ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದಕ್ಷಿಣ ಏಷ್ಯಾದ ಪ್ರದೇಶದಲ್ಲಿ ವಿಶೇಷವಾಗಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಸುಗಮಗೊಳಿಸುತ್ತದೆ.

ಲಂಕಾ ಬಿಕ್ಕಟ್ಟಿನಿಂದ ನಾವೇನು ​​ಕಲಿಯಬಹುದು?

ದೇಶದ ಆಡಳಿತ ಜಾರಿಗೆ ತಂದ ನೀತಿಗಳೇ ಆರ್ಥಿಕ ಬಿಕ್ಕಟ್ಟಿಗೆ ಕಾರಣ. ಇಂತಹ ಪರಿಸ್ಥಿತಿಯ ಲಾಭವನ್ನು ನಮ್ಮ ಎದುರಾಳಿಗಳು ಬಳಸಿಕೊಳ್ಳುತ್ತಾರೆ ಎಂಬ ಎಚ್ಚರವಿರಬೇಕು. ಪ್ರಾದೇಶಿಕ ಏಕೀಕರಣಕ್ಕಾಗಿ ನಾವು ಶ್ರಮಿಸಬೇಕು. ಜಿಡಿಪಿ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬೇಕು. ಪರಿಣಾಮಕಾರಿ ಗಡಿ ನೀತಿಗಳನ್ನು ರೂಪಿಸಬೇಕು. ನೀತಿಗಳನ್ನು ಜಾರಿಗೊಳಿಸುವಾಗ ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಬೇಕು. ಉತ್ತಮ ಆಡಳಿತ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸರ್ವಾಧಿಕಾರಿ ಧೋರಣೆಗಿಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅನುಸರಿಸಬೇಕು. ವಿವಿಧ ಜನಾಂಗಗಳು ಮತ್ತು ಧರ್ಮಗಳ ನಡುವೆ ಸಾಮರಸ್ಯವನ್ನು ಉತ್ತೇಜಿಸುವುದು ಮುಖ್ಯವಾಗಿದೆ.

ಈ ಬಿಕ್ಕಟ್ಟಿನಿಂದ ಹೊರಬರಲು ಶ್ರೀಲಂಕಾ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ?

ಶ್ರೀಲಂಕಾ ಸರ್ಕಾರ ಎದುರಿಸುತ್ತಿರುವ ತಕ್ಷಣದ ಪ್ರಮುಖ ಸವಾಲು ಎಂದರೆ ಆರ್ಥಿಕ ಬಿಕ್ಕಟ್ಟು. ಇದರಿಂದ ಹೊರಬರಲು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ವಿಶೇಷವಾಗಿ ಬಡವರ ಸಂಕಷ್ಟವನ್ನು ಕಡಿಮೆ ಮಾಡಬೇಕು. ವಿದೇಶಿ ಸಾಲ ಮರುಪಾವತಿ ನೀತಿಯನ್ನು ಮಾರ್ಪಡಿಸಬೇಕು. ಜುಲೈನಲ್ಲಿ ಸಾಲದ ಪ್ರಮುಖ ಪಾಲು ಬಾಕಿ ಇದೆ. IMFನಂತಹ ಸಂಸ್ಥೆಗಳ ಸಹಯೋಗದೊಂದಿಗೆ ಸರ್ಕಾರವು ಸಾಲಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಆಹಾರ, ಇಂಧನ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಆಮದಿಗಾಗಿ ಕ್ರೆಡಿಟ್ ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಬೇಕು. ಅತ್ಯಂತ ಅನುಭವಿ ರನಿಲ್ ವಿಕ್ರಮಸಿಂಘೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದರೂ, ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಅಧಿಕಾರದಿಂದ ಕೆಳಗಿಳಿಯಬೇಕೆಂಬ ರಾಷ್ಟ್ರವ್ಯಾಪಿ ಬೇಡಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ಗೋಟಾಬಯಾ ಅವರ ತಪ್ಪು ನೀತಿಗಳಿಂದ ದೇಶದ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ರಾಜಪಕ್ಸೆ ಕುಟುಂಬವು ಭ್ರಷ್ಟ ನೀತಿಗಳಿಂದ ರಾಷ್ಟ್ರದ ಭವಿಷ್ಯವನ್ನು ಹಾಳು ಮಾಡಿದೆ ಎಂದು ಜನರು ಕೋಪಗೊಂಡಿದ್ದಾರೆ.

ಬಿಕ್ಕಟ್ಟು ಪರಿಹಾರಕ್ಕಾಗಿ ಅನುಭವಿಗಳು ಮತ್ತು ರಾಜಕಾರಣಿಗಳೊಂದಿಗೆ ತಂಡವನ್ನು ರಚಿಸುವುದು ಹೊಸ ಪ್ರಧಾನಿಯ ತಕ್ಷಣದ ಕರ್ತವ್ಯವಾಗಿದೆ. ಶ್ರೀಲಂಕಾದ ಜನರು ಸದ್ಯಕ್ಕೆ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ರಾತ್ರೋರಾತ್ರಿ ಯಾವುದನ್ನೂ ಪರಿಹರಿಸಲು ಸಾಧ್ಯವಿಲ್ಲ. ಮುಂದಿನ ಐದು ವರ್ಷಗಳು ಸವಾಲಿನದ್ದಾಗಿರುತ್ತವೆ. ಸರಿಯಾದ ಆಡಳಿತದ ಮೂಲಕ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ಶ್ರೀಲಂಕಾದ ರಾಯಭಾರಿ ನಿರುಪಮಾ ರಾವ್ ಹೇಳಿದ್ದಾರೆ.

ಇದನ್ನೂ ಓದಿ:ಬರ್ತಡೇ ಪಾರ್ಟಿ ಎಂದ ಹೇಳಿ, 35 ವರ್ಷದ ವ್ಯಕ್ತಿ ಜೊತೆಗೆ 12ರ ಬಾಲೆ ಮದುವೆ!

ABOUT THE AUTHOR

...view details