ಶ್ರೀಲಂಕಾ: ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಸಲ್ಲಿಸಿರುವುದಾಗಿ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕ್ಯಾಬ್ರಾಲ್ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ರಾಜೀನಾಮೆ - ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ಅಜಿತ್ ನಿವಾರ್ಡ್ ಕ್ಯಾಬ್ರಾಲ್
ಸರ್ಕಾರದ ಸಂಪುಟದಲ್ಲಿದ್ದ ಎಲ್ಲಾ 26 ಸಚಿವರು ಭಾನುವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಮಹತ್ವದ ಬೆಳವಣಿಗೆಯಲ್ಲಿ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕ್ಯಾಬ್ರಾಲ್ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಹೊರತುಪಡಿಸಿ ಸಂಪುಟದ ಎಲ್ಲಾ 26 ಸಚಿವರು ಭಾನುವಾರ ರಾತ್ರಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ. ಈ ಕುರಿತು ನಮಲ್ ರಾಜಪಕ್ಸ ಖುದ್ದು ಟ್ವೀಟ್ ಮಾಡಿದ್ದರು. ಇದೀಗ ಕೇಂದ್ರ ಬ್ಯಾಂಕ್ ಗವರ್ನರ್ ಕೂಡ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಮುಂದುವರಿಕೆ