ನವದೆಹಲಿ: ಭಾರತದಲ್ಲಿ ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್-ವಿ ಬಳಕೆಯ ಬಗ್ಗೆ ತಜ್ಞರ ಸಮಿತಿಯು ಇಂದು ಚರ್ಚಿಸಲಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ‘ಸ್ಪುಟ್ನಿಕ್ ವಿ’ಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಬಗ್ಗೆ ಚರ್ಚೆ ನಡೆಸಲಾಗುವುದು.
ಒಂದೆಡೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ, ಮತ್ತೊಂದೆಡೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮೋದನೆ ನೀಡುವುದಕ್ಕೆ ಮಹತ್ವ ಬಂದಿದೆ. ಈ ಕುರಿತಾಗಿ ಇಂದು ವಿಷಯ ತಜ್ಞರ ಸಮಿತಿ ಮಹತ್ವದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಸ್ಪುಟ್ನಿಕ್-ವಿ ಲಸಿಕೆ ಬಳಕೆಗೆ ಅನುಮೋದನೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಸ್ಪುಟ್ನಿಕ್-ವಿ ತುರ್ತು ಬಳಕೆಗೆ ಅನುಮೋದನೆ ನೀಡುವುದನ್ನು ಪರಿಗಣಿಸಲು ಭಾರತೀಯ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಇಂದು ಸಭೆ ಸೇರಲಿದೆ. ಏಪ್ರಿಲ್ 1 ರಂದು ನಡೆದ ತನ್ನ ಕೊನೆಯ ಸಭೆಯಲ್ಲಿ, ಈ ಲಸಿಕೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೇಗೆ ಸಕ್ರಿಯಗೊಳಿಸುತ್ತದೆ ಎಂಬ ಬಗ್ಗೆ ಮತ್ತಷ್ಟೂ ವಿವರಗಳನ್ನು ಸಲ್ಲಿಸುವಂತೆ ಲಸಿಕೆ ಅಭಿವೃದ್ಧಿಪಡಿಸಿರುವ ಕಂಪನಿಗೆ ಸೂಚಿಸಿತ್ತು.