ನವದೆಹಲಿ:ಅಶಿಸ್ತಿನ ವರ್ತನೆ ಆರೋಪದ ಮೇಲೆ ಆಗಸ್ಟ್ 10ರಂದು ಲೋಕಸಭೆಯಿಂದ ಅಮಾನತುಗೊಂಡಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸಮಿತಿಯ ವಿಚಾರಣೆಯನ್ನು ಎದುರಿಸಲಿದ್ದಾರೆ. ಆದರೆ, ಲೋಕಸಭೆಯಲ್ಲಿ ತಾವಾಡಿದ ಮಾತುಗಳನ್ನು ಶನಿವಾರ ಸಮರ್ಥಿಸಿಕೊಂಡಿರುವ ಅವರು, ಕಾನೂನು ಆಶ್ರಯದ ಆಯ್ಕೆಯು ನನಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ.
"ನನ್ನನ್ನು ಗಲ್ಲಿಗೇರಿಸಿದ ಬಳಿಕ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನಾನು ಅಸಂಸದೀಯವಾದ ಯಾವುದನ್ನೂ ಹೇಳಿಲ್ಲ. 'ನೀರವ್' ಎಂಬುದು ಹಿಂದಿ ಪದ. ಇದನ್ನು ಜನತೆ ತಮ್ಮ ದೈನಂದಿನ ಮಾತುಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಅವರು (ಬಿಜೆಪಿ) ಸಣ್ಣ ವಿಷಯವನ್ನು ಬೆಟ್ಟ ಮಾಡಲು ಪ್ರಯತ್ನಿಸುತ್ತಿದ್ದಾರೆ'' ಎಂದು ಅಧೀರ್ ರಂಜನ್ ಚೌಧರಿ 'ಈಟಿವಿ ಭಾರತ'ಗೆ ತಿಳಿಸಿದರು.
''ಸ್ಪೀಕರ್ ಸದನದ ಪಾಲಕರಾಗಿರುವುದರಿಂದ ಅವರ ನಿರ್ಧಾರದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ, ಸುಪ್ರೀಂ ಕೋರ್ಟ್‌ಗೆ ಹೋಗುವ ಕಾನೂನು ಆಯ್ಕೆಯು ನಮ್ಮ ಮುಂದೆ ಮುಕ್ತವಾಗಿದೆ'' ಎಂದು ಅವರು ಹೇಳಿದರು. ಇದೇ ವೇಳೆ, ಈ ಅಮಾನತು ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಆಶ್ರಯಿಸಲು ಸೂಕ್ತವಾದ ಪ್ರಕರಣ ಎಂಬ ಸಂಸದ ಮನೀಶ್ ತಿವಾರಿ ಹೇಳಿಕೆಗೆ ಚೌಧರಿ ಪ್ರತಿಕ್ರಿಯಿಸಿ, ''ಇದೊಂದು ಹಿಮ್ಮುಖ ಹೆಜ್ಜೆ. ಇದು ಸಂಸದೀಯ ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆ ತರಲಿದೆ'' ಎಂದೂ ಅಭಿಪ್ರಾಯಪಟ್ಟರು.
''ನನ್ನನ್ನು ಸಮಿತಿಯು ಕರೆದರೆ ನಾನು ಖಂಡಿತವಾಗಿಯೂ ಸಮಿತಿಯ ಮುಂದೆ ಹಾಜರಾಗುತ್ತೇನೆ. ನಾವು ಒಂದು ಪಕ್ಷವಾಗಿ ನಿಯಮಗಳನ್ನು ಪಾಲಿಸುತ್ತೇವೆ. ನಾನು ಕೂಡ ನಿಯಮಗಳನ್ನು ಪಾಲಿಸುತ್ತೇನೆ. ನಾನು ಸದನದಲ್ಲಿ ಮಾತನಾಡುವಾಗ ಕ್ಷಮೆ ಕೇಳಬೇಕು ಎಂದು ಯಾರೂ ಹೇಳಲಿಲ್ಲ. ನನ್ನ ಭಾಷಣವನ್ನು ಪೂರ್ಣಗೊಳಿಸಲು ನನಗೆ ಅವಕಾಶ ನೀಡಿದ್ದರೆ, ನಾನು ನನ್ನ ಟೀಕೆಗಳನ್ನು ವಿವರಿಸುತ್ತಿದ್ದೆ. ಸೇಡಿನ ಕಾರಣದಿಂದ ಸದನದಲ್ಲಿ ನನ್ನ ಹೇಳಿಕೆಯ ಬಗ್ಗೆ ಸಚಿವರು ನನ್ನಿಂದ ಕ್ಷಮೆಯಾಚಿಸಲು ಪ್ರಯತ್ನಿಸಿದರು. ನಾನೇಕೆ ಕ್ಷಮೆ ಕೇಳಬೇಕು'' ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡುತ್ತಿದ್ದಾಗ ಪ್ರತಿಪಕ್ಷಗಳು ಸದನದಲ್ಲಿ ಹೊರನಡೆದಿರುವುದನ್ನು ಸಮರ್ಥಿಸಿಕೊಂಡ ಅವರು, ''ನಾವು ಇನ್ನೇನು ಮಾಡಲು ಸಾಧ್ಯ?. ಅಧಿವೇಶನ ಆರಂಭವಾದಾಗಿನಿಂದ ಎಲ್ಲ ಪ್ರತಿಪಕ್ಷಗಳು ಮಣಿಪುರದ ಜ್ವಲಂತ ಸಮಸ್ಯೆಯ ಬಗ್ಗೆ ಪ್ರಧಾನಿಯವರ ಪ್ರತಿಕ್ರಿಯೆಯನ್ನು ಬಯಸಿದ್ದವು. ಆದರೆ, ಪ್ರಧಾನಿ ಸದನಕ್ಕೆ ಬರದ ಕಾರಣ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ತರಬೇಕಾಯಿತು. ನಾವು ಎರಡು ಗಂಟೆಗಳ ಕಾಲ ಪ್ರಧಾನಿಯ ಮಾತುಗಳನ್ನು ಕೇಳಿಸಿಕೊಂಡೆವು. ಅವರು ಮಣಿಪುರದ ಬಗ್ಗೆ ಉಲ್ಲೇಖ ಮಾಡದಿದ್ದಾಗ ನಾವು ಪ್ರತಿಭಟನೆಯ ಅರ್ಥದಲ್ಲಿ ಸದನದಿಂದ ಹೊರಬಂದೆವು'' ಎಂದು ವಿವರಿಸಿದರು.
ಅಲ್ಲದೇ, ''ಪ್ರಧಾನಿ ಭಾಷಣದ ಸಮಯದಲ್ಲಿ ತಮ್ಮದೇ ಸಂಸದರು ಕೂಡ ನಿದ್ದೆ ಮಾಡುತ್ತಿರುವುದು ಕಂಡುಬಂದಿದೆ. 2014ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದಾಗ ಅವರು ಸಂಸತ್ತಿನ ಭವನದ ಪ್ರವೇಶದ್ವಾರದಲ್ಲಿ ತಲೆಬಾಗಿದ್ದರು. ಆದರೆ, ಅವಿಶ್ವಾಸ ನಿರ್ಣಯದಂತಹ ಸಂಸದೀಯ ಸಾಧನದ ಮೂಲಕ ಪ್ರಧಾನಿಯೊಬ್ಬರು ಲೋಕಸಭೆಗೆ ಬರುವಂತೆ ಒತ್ತಾಯಿಸಿದ್ದು ಇದೇ ಮೊದಲು'' ಎಂದು ಹೇಳಿದರು.
ಇದನ್ನೂ ಓದಿ:Adhir Ranjan Chowdhury: ಲೋಕಸಭೆಯಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು