ಪಶ್ಚಿಮ ಗೋದಾವರಿ : ಇಡೀ ಭಾರತಕ್ಕೆ ಸ್ಫೂರ್ತಿಯಾಗಿರುವ ಅಲ್ಲೂರಿ ಜಯಂತಿಯಂದು ನಾವೆಲ್ಲರೂ ಇಲ್ಲಿ ಭೇಟಿಯಾಗಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ನಡೆದ ಅಲ್ಲೂರಿ ಅವರ 125 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದು ಆಂಧ್ರ ರಾಜ್ಯದ ವೀರಭೂಮಿ, ಇಂತಹ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅಖಿಲ ಭಾರತದ ಪರವಾಗಿ ಅಲ್ಲೂರಿ ಅವರ ಪಾದಕ್ಕೆ ನಮಸ್ಕಾರ. ಅಲ್ಲೂರಿ ಕುಟುಂಬದೊಂದಿಗೆ ವೇದಿಕೆ ಹಂಚಿಕೊಳ್ಳುವ ಭಾಗ್ಯ ನನ್ನದಾಗಿದೆ. ದೇಶ ಈಗ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಆಂದೋಲನ ಆರಂಭವಾಗಿ 100 ವರ್ಷಗಳಾಗಿವೆ. ಈ ಸಮಯದಲ್ಲಿ ಅಲ್ಲೂರಿ ಸೀತಾರಾಮರಾಜು ಅವರ 125ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಅಲ್ಲೂರಿ ಶೌರ್ಯದ ಪ್ರತೀಕ: ಅಲ್ಲೂರಿ ಸೀತಾರಾಮರಾಜು ಆದಿವಾಸಿಗಳ ಶೌರ್ಯ, ಧೈರ್ಯದ ಪ್ರತೀಕ. ಅಲ್ಲೂರಿ ಅವರ ರೋಮಾಂಚಕ ಜೀವನ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. 'ಮನದೇ ರಾಜ್ಯ' ಎಂಬ ಘೋಷಣೆಯೊಂದಿಗೆ ಜನರನ್ನು ಒಟ್ಟುಗೂಡಿಸಿದ ಕೀರ್ತಿ ಅಲ್ಲೂರಿಗೆ ಸಲ್ಲುತ್ತದೆ. ಅವರು ಬ್ರಿಟಿಷರ ವಿರುದ್ಧ ವೀರೋಚಿತವಾಗಿ ಹೋರಾಡಿದರು. ಅಂದು ಅನೇಕ ಯುವಕರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅದರಂತೆ ಇಂದು ದೇಶದ ಅಭಿವೃದ್ಧಿಯಲ್ಲೂ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ಅವರ ಸಾಧನೆ ಸ್ಮರಿಸಿದರು.
ಆಂಧ್ರದ ತ್ಯಾಗ ಬಲಿದಾನಿಗಳಿಗೆ ನಮನ: ಆಂಧ್ರ ರಾಜ್ಯವು ಅನೇಕ ದೇಶಭಕ್ತರ ಸಂತಾನಸ್ಥಾನವಾಗಿದೆ. ಪಿಂಗಳಿ ವೆಂಕಯ್ಯ, ಕನ್ನೆಗಂಟಿ ಹನುಮಾನ್, ಪೊಟ್ಟಿ ಶ್ರೀರಾಮುಲು, ವೀರೇಶಲಿಂಗಂ ಪಂತುಲು ಮುಂತಾದ ಮಹಾನ್ ವ್ಯಕ್ತಿಗಳ ನಾಡು ಆಂಧ್ರಪ್ರದೇಶ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇಂತಹವರ ಕನಸುಗಳು ನನಸಾಗಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಒಂದು ದೇಶ, ಒಂದು ಪರಿಕಲ್ಪನೆಯು ಯಾವಾಗಲೂ ದೇಶದ ಇತಿಹಾಸದ ಭಾಗವಾಗಿದೆ. ದೇಶಕ್ಕಾಗಿ ಅನೇಕ ಮಹಾನ್ ವ್ಯಕ್ತಿಗಳು ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗಗಳನ್ನು ನಿರಂತರವಾಗಿ ಸ್ಮರಿಸುತ್ತಾ ಮುನ್ನಡೆಯಬೇಕು. ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು. ಆ ಸ್ಫೂರ್ತಿಗಾಗಿ ನಾವು ಆಜಾದಿಕ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದರು.