ನವದೆಹಲಿ:ಜನವರಿ 22 ಕ್ಕೆ ರಾಮಮಂದಿರದ ಉದ್ಘಾಟನಾ ಸಮಾರಂಭ ಮತ್ತು ರಾಮಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭಕ್ಕೆ ಅಯೋಧ್ಯೆ ಸಜ್ಜಾಗಿದೆ. ದಿವ್ಯ ಕಾರ್ಯಕ್ರಮಕ್ಕೆ ಮತ್ತು ಅದರ ನಂತರ ಬರುವ ಭಕ್ತಾದಿಗಳಿಗಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆ ವಿಸ್ತರಿಸಿವೆ. ಜನವರಿ 23 ರಿಂದ ಸಾರ್ವಜನಿಕರಿಗೆ ದೇಗುಲ ದರ್ಶನ ಮುಕ್ತವಾಗಲಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದ ಬಳಿಕ, ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಫೆಬ್ರವರಿ 1 ರಿಂದ ಚೆನ್ನೈ, ಬೆಂಗಳೂರು ಮತ್ತು ಮುಂಬೈಯಿಂದ ಅಯೋಧ್ಯೆಗೆ ವಿಮಾನ ಸೇವೆಗಳನ್ನು ನೀಡಲು ಮುಂದಾಗಿದೆ.
ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು 189 ಆಸನಗಳ ಬೋಯಿಂಗ್ 737 ವಿಮಾನವನ್ನು ಈ ಮಾರ್ಗಗಳಲ್ಲಿ ಹಾರಾಟ ನಡೆಸುವುದಾಗಿ ಘೋಷಿಸಿದೆ."ಸ್ಪೈಸ್ ಜೆಟ್ ತನ್ನ ನೆಟ್‌ವರ್ಕ್ ಅನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಶೀಘ್ರದಲ್ಲೇ ಅಯೋಧ್ಯೆಯನ್ನು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಿದೆ" ಎಂದು ಏರ್‌ಲೈನ್ ತಿಳಿಸಿದೆ.
ಜನವರಿ 21 ರಂದು ಸ್ಪೈಸ್‌ಜೆಟ್ ಸಂಸ್ಥೆಯು ದೆಹಲಿಯಿಂದ ಅಯೋಧ್ಯೆಗೆ ವಿಶೇಷ ವಿಮಾನದ ಸಂಚಾರ ನಡೆಸಿತ್ತು. ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ವಿವಿಧೆಡೆಯಿಂದ ಅಯೋಧ್ಯೆಗೆ, ಬಳಿಕ ಅಲ್ಲಿಂದ ಅದೇ ದಿನ ರಿಟರ್ನ್ ಫ್ಲೈಟ್ ಸಹ ಇರಲಿದೆ. ಭಕ್ತರಿಗೆ ತೊಂದರೆ ಉಂಟಾಗದಂತೆ ಮುಕ್ತ ಪ್ರಯಾಣವನ್ನು ನೀಡಲಾಗುವುದು ಎಂದಿದೆ.