ಪೂರ್ನಿಯಾ (ಬಿಹಾರ್): ಪೂರ್ನಿಯಾ ಜಿಲ್ಲೆಯ ಎಸ್ಪಿ ದಯಾಶಂಕರ್ ಎಂಬುವರಿಗೆ ಸೇರಿದ ಹಲವಾರು ಸ್ಥಳಗಳ ಮೇಲೆ ವಿಶೇಷ ಜಾಗೃತ ದಳ (ಸ್ಪೆಷಲ್ ವಿಜಿಲೆನ್ಸ್ ಯುನಿಟ್) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐಪಿಎಸ್ ದಯಾ ಶಂಕರ್ ಅವರಿಗೆ ಸೇರಿದ ಸ್ಥಳಗಳಲ್ಲಿ ಸುಮಾರು 72 ಲಕ್ಷ ನಗದು ಪತ್ತೆಯಾಗಿದೆ. ಪತ್ತೆಯಾದ ಹಣವನ್ನು ಎಣಿಸಲು ಅಧಿಕಾರಿಗಳು ನೋಟು ಎಣಿಕೆ ಮತ್ತು ಚಿನ್ನ ಬೆಳ್ಳಿ ತೂಕದ ಯಂತ್ರಗಳನ್ನು ತರಿಸಿಕೊಂಡಿದ್ದಾರೆ.
ಪೂರ್ನಿಯಾ ಎಸ್ಪಿ ದಯಾಶಂಕರ್ ಅವರಿಗೆ ಸೇರಿದ ಹಲವಾರು ಸ್ಥಳಗಳ ಮೇಲೆ ಮಂಗಳವಾರ ಬೆಳಗ್ಗೆಯಿಂದ ವಿಶೇಷ ಜಾಗೃತ ದಳದ ದಾಳಿ ನಡೆಯುತ್ತಿದೆ. ಪೂರ್ನಿಯಾ ಎಸ್ಪಿ ದಯಾಶಂಕರ್ ನಿವಾಸ, ಸದರ್ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ನಿವಾಸ ಮತ್ತು ಪೊಲೀಸ್ ಲೈನ್‌ನ ಕೆಲ ಸ್ಥಳಗಳಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.