ನವದೆಹಲಿ : ಆಗಸ್ಟ್ 31, 2023ರಂದು I.N.D.I.A. ಮೈತ್ರಿಕೂಟದ ಮೂರನೇ ಸಭೆ ಮುಂಬೈನಲ್ಲಿ ಆರಂಭವಾಗಿತ್ತು. ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರ ಏನಿರಬೇಕೆಂಬ ಬಗ್ಗೆ ಜೋರಾದ ಚರ್ಚೆಗಳು ಈ ಸಭೆಯಲ್ಲಿ ನಡೆಯುತ್ತಿದ್ದವು. ಅಂದು ದೇಶಾದ್ಯಂತ ರಕ್ಷಾಬಂಧನ ಹಬ್ಬವು ಸಂಪ್ರದಾಯ ಹಾಗೂ ಸಡಗರದಿಂದ ನಡೆದಿತ್ತು. ಏತನ್ಮಧ್ಯೆ ಆಶ್ಚರ್ಯಕರ ಘೋಷಣೆಯೊಂದನ್ನು ಮಾಡಿದ ಕೇಂದ್ರ ಸರ್ಕಾರ, ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲಿರುವುದಾಗಿ ಘೋಷಿಸಿತು. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಮುಕ್ತಾಯಗೊಳ್ಳುವ ಕೆಲವೇ ದಿನಗಳಲ್ಲಿ ಸಂಸತ್ತಿನ ಅಧಿವೇಶನ ಕರೆಯಲಾಗಿರುವುದು ಕೂಡ ಗಮನಾರ್ಹ.
ವಿಶೇಷ ಅಧಿವೇಶನವು ಐದು ಕಲಾಪಗಳನ್ನು ಹೊಂದಿರುತ್ತದೆ ಮತ್ತು ಅಮೃತ್ ಕಾಲ (ಸ್ವಾತಂತ್ರ್ಯದ 100 ವರ್ಷಗಳವರೆಗಿನ ಕಾಲು ಶತಮಾನ) ನಡುವೆ, ಫಲಪ್ರದ ಚರ್ಚೆಗಳು ಮತ್ತು ಸಂವಾದಗಳನ್ನು ನಡೆಸಲು ಸರ್ಕಾರ ಎದುರು ನೋಡುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಇದೇ ಮೊದಲ ಬಾರಿ ಏನಲ್ಲ. ವಿಶೇಷ ಅಧಿವೇಶನ ಕರೆದಿರುವುದು ಅಸಾಮಾನ್ಯ ಆದರೂ ಇದು ಅಸಾಂವಿಧಾನಿಕವಲ್ಲ. ಭಾರತದ ಸಂವಿಧಾನದ 85 ನೇ ವಿಧಿಯ ಪ್ರಕಾರ, ರಾಷ್ಟ್ರಪತಿಗಳು ಕಾಲಕಾಲಕ್ಕೆ ಸಂಸತ್ತಿನ ಪ್ರತಿಯೊಂದು ಸದನವನ್ನು ತಮಗೆ ಸೂಕ್ತವೆಂದು ತೋರುವ ಸಮಯದಲ್ಲಿ ಮತ್ತು ಸ್ಥಳದಲ್ಲಿ ಸಭೆ ಸೇರಲು ಸೂಚಿಸಬಹುದು. ಆದರೆ ಎರಡು ಅಧಿವೇಶನಗಳ ಮಧ್ಯದ ಅಂತರ 6 ತಿಂಗಳು ಮೀರಬಾರದು.
ಮಾನ್ಸೂನ್ ಅಧಿವೇಶನವು ಈಗಷ್ಟೇ ಮುಗಿದಿರುವುದರಿಂದ, ಆರು ತಿಂಗಳಿಗಿಂತ ಹೆಚ್ಚು ಅಂತರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲಿಲ್ಲ. ಇದಲ್ಲದೆ, ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಮತ್ತು ಚಳಿಗಾಲದ ಅಧಿವೇಶನ ಹೀಗೆ ವರ್ಷದಲ್ಲಿ ಈ ಮೂರೇ ಅಧಿವೇಶನ ನಡೆಯಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ.
ಸಂವಿಧಾನದ 352 ನೇ ವಿಧಿಯು ತುರ್ತು ಪರಿಸ್ಥಿತಿ ಘೋಷಣೆಯ ಸಂದರ್ಭದಲ್ಲಿ ಲೋಕಸಭೆಯ "ವಿಶೇಷ ಅಧಿವೇಶನ" ವನ್ನು ಉಲ್ಲೇಖಿಸುತ್ತದೆ. ಆದರೆ ಇದು ಇಲ್ಲಿ ಪ್ರಸ್ತುತವಲ್ಲ. ಈ ಹಿಂದೆ ಸರಿಯಾದ ಚರ್ಚೆಗಳು ಮತ್ತು ಸಂವಾದಗಳೊಂದಿಗೆ ಕೆಲ ಐತಿಹಾಸಿಕ ಘಟನೆಗಳನ್ನು ಆಚರಿಸಲು ವಿಶೇಷ ಅಧಿವೇಶನಗಳನ್ನು ನಡೆಸಲಾಗಿದೆ. 1962 ರಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೂಚನೆಯ ಮೇರೆಗೆ ಭಾರತ-ಚೀನಾ ಯುದ್ಧ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನವೆಂಬರ್ 8-9 ರಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು.
ಡಾ.ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಲು 2015 ರ ನವೆಂಬರ್ 26-27 ರಂದು ವಿಶೇಷ ಅಧಿವೇಶನ ನಡೆದಿತ್ತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಎರಡು ದಿನಗಳ ಈ ವಿಶೇಷ ಅಧಿವೇಶನಗಳು ಭಾರತೀಯ ಸಂವಿಧಾನದ ಶಿಲ್ಪಿಯನ್ನು ಗೌರವಿಸುವ ವರ್ಷವಿಡೀ ಆಚರಣೆಗಳ ಭಾಗವಾಗಿದ್ದವು. ಅದೇ ವರ್ಷ, ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿತು.