ಅಗರ್ತಲಾ(ತ್ರಿಪುರಾ): ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಪುರುಷರಷ್ಟೇ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ, ತ್ರಿಪುರಾ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಹೊಸ ಪರವಾನಗಿಗಳನ್ನು ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹೊಸದಾಗಿ 408 ನ್ಯಾಯಬೆಲೆ ಅಂಗಡಿಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲಿದೆ.
ಈ ಮೂಲಕ ಲಕ್ಷಾಂತರ ಮಂದಿಗೆ ಪಡಿತರವನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುವುದು ಮಾತ್ರವಲ್ಲದೇ, ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಆದಾಯದ ಮೂಲವೂ ಸಿಗಲಿದೆ. ಇದರಿಂದ ಅವರೂ ಕೂಡಾ ಯಾರಿಗೂ ಹೊರೆಯಾಗದೇ ಬದುಕುತ್ತಾರೆ ಎಂಬ ಚಿಂತನೆ ಸರ್ಕಾರದ್ದಾಗಿದೆ.