ಎರ್ನಾಕುಲಂ (ಕೇರಳ):ದೇಶದ ಗಮನ ಸೆಳೆದಿದ್ದ ಕೇರಳದ ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದ ಎರಡನೇ ಹಂತದ ವಿಚಾರಣೆಯ ಆರು ಅಪರಾಧಿಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಆರು ಜನರ ಪೈಕಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಮೂವರಿಗೆ ಮೂರು ವರ್ಷಗಳ ಸೆರೆವಾಸ ವಿಧಿಸಿ ಆದೇಶಿಸಿದೆ.
2010ರಲ್ಲಿ ಕೊಟ್ಟಾಯಂ ಜಿಲ್ಲೆಯ ತೊಡುಪುಳ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ಆರೋಪಿಗಳಾದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು ದೋಷಿ ಎಂದು ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು. ಇತರ ಐವರು ಆರೋಪಿಗಳನ್ನು ಸಾಕ್ಷ್ಯಾಧಾರ ಕೊರತೆ ಕಾರಣ ಖುಲಾಸೆಗೊಳಿಸಿತ್ತು.
ಇಂದು ಎರಡನೇ ಹಂತದ ವಿಚಾರಣೆಯ ಆರು ಅಪರಾಧಿಗಳಿಗೂ ಕೊಚ್ಚಿಯ ಎನ್‌ಐಎ ವಿಶೇಷ ಕೋರ್ಟ್ನ ನ್ಯಾಯಾಧೀಶ ಅನಿಲ್ ಭಾಸ್ಕರ್ ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ. ಎರಡನೇ ಆರೋಪಿ ಸಜಿಲ್, ಮೂರನೇ ಆರೋಪಿ ಎಂ.ಕೆ. ನಾಸರ್ ಮತ್ತು ಐದನೇ ಆರೋಪಿ ನಜೀಬ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, ಸಜಿಲ್‌ಗೆ ಐದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಉಳಿದ ಮೂವರು ಅಪರಾಧಿಗಳಾದ ನೌಶಾದ್, ಮೊಯ್ತೀನ್ ಕುಂಜು ಮತ್ತು ಅಯೂಬ್ಗೆ ತಲಾ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಅಪರಾಧಿಗಳ ವಿರುದ್ಧದ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಆರೋಪ ಹಾಗೆಯೇ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.