ಕೊಚ್ಚಿ (ಕೇರಳ) : 2010ರಲ್ಲಿ ನಡೆದ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು 'ದೋಷಿಗಳು' ಎಂದು ಕೇರಳದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ.
ತೊಡುಪುಳ ನ್ಯೂಮನ್ ಕಾಲೇಜಿನ ಶಿಕ್ಷಕರಾಗಿದ್ದ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ವಿಚಾರಣೆಯಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ ಯತ್ನ, ಪಿತೂರಿ ಮತ್ತು ಇತರೆ ವಿವಿಧ ಅಪರಾಧಗಳಡಿ ವಿಚಾರಣೆಗೆ ಒಳಗಾದ ಹನ್ನೊಂದು ಆರೋಪಿಗಳ ಪೈಕಿ ಆರು ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸಜಲ್, ನಾಸರ್, ನಜೀಬ್, ನೌಶಾದ್, ಮೊಯ್ತೀನ್ ಕುಂಜ್ ಮತ್ತು ಅಯೂಬ್ ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದ್ದು, ಶಫೀಕ್, ಅಜೀಜ್, ಜುಬೇರ್, ಮಹಮ್ಮದ್ ರಫಿ ಮತ್ತು ಮನ್ಸೂರ್ ಖುಲಾಸೆಯಾಗಿದ್ದಾರೆ.
ಮೊದಲ ಹಂತದಲ್ಲಿ 31 ಆರೋಪಿಗಳು ವಿಚಾರಣೆ ಎದುರಿಸಿದ್ದರು. ಈ ಪೈಕಿ, ಏಪ್ರಿಲ್ 30, 2015ರಲ್ಲಿ ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ 10 ಅಪರಾಧಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಅಪರಾಧಿಗಳಿಗೆ ಆಶ್ರಯ ನೀಡಿದ ಇತರೆ ಮೂವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಒಟ್ಟು13 ಜನರನ್ನು ತಪ್ಪಿತಸ್ಥರೆಂದು ಗುರುತಿಸಿ ಶಿಕ್ಷೆ ವಿಧಿಸಿದ್ದು, 18 ಮಂದಿ ದೋಷಮುಕ್ತರಾಗಿದ್ದರು.