ನಾಸಿಕ್ (ಮಹಾರಾಷ್ಟ್ರ) :ನಾಸಿಕ್ ನಗರಸಭೆ ವತಿಯಿಂದ ಗೋದಾವರಿ ನದಿಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ. ಈ ಬಾರಿ 12 ಟ್ರಕ್‌ಗಳಷ್ಟು ಹೂಳು ಹೊರತೆಗೆಯಲಾಗಿದೆ. ಈ ವೇಳೆ ರಾಮಕುಂಡದಲ್ಲಿ ಮುಳುಗಿ ಹೋಗಿದ್ದ ಸಾಕಷ್ಟು ಮೂಳೆಗಳೂ ಕಂಡುಬಂದಿವೆ.
ಕುಂಭಮೇಳದ ವೇಳೆ ನಾಸಿಕ್ ಮುನ್ಸಿಪಲ್ ಕಾರ್ಪೋರೇಷನ್ ವತಿಯಿಂದ ರಾಮಕುಂಡ್ ನದಿಪಾತ್ರದಲ್ಲಿ ಕಾಂಕ್ರೀಟ್ ಹಾಕಲಾಗಿತ್ತು. ಕಾಂಕ್ರಿಟೀಕರಣದಿಂದಾಗಿ ನದಿಯಲ್ಲಿನ ನೈಸರ್ಗಿಕ ಜಲಮೂಲಗಳು ನಶಿಸಿಹೋಗಿವೆ. ಆಗ ಕೆಸರು, ಕಲ್ಲು, ಮರಳುಮಿಶ್ರಿತ ಕಸ ಹೊರ ತೆಗೆಯಲಾಗಿದೆ. ಅಂತೆಯೇ ಸೀತಾಕುಂಡ, ರಾಮ ಕುಂಡ, ಹನುಮಾನ್ ಕುಂಡದ ದ ಸ್ವಚ್ಛತಾ ಕಾರ್ಯ ಮುಂದಿನ ವಾರದವರೆಗೂ ನಡೆಯಲಿದೆ. ಕುಂಡಗಳ ಮೆಟ್ಟಿಲುಗಳು ಸಂಪೂರ್ಣ ಪಾಚಿಗಟ್ಟಿದ್ದು ಸ್ವಚ್ಛಗೊಳಿಸಲಾಗುತ್ತಿದೆ. ಗಂಗಾಘಾಟ್ ಪ್ರದೇಶದಲ್ಲೂ ಸ್ವಚ್ಛತಾ ಕೆಲಸ ನಡೆಯುತ್ತಿದೆ.
ಒಂದೆಡೆ ಸ್ವಚ್ಛತಾ ಅಭಿಯಾನದಡಿಯಲ್ಲಿ ಕುಂಡಗಳನ್ನು ಶುಚಿಗೊಳಿಸುತ್ತಿದ್ದರೆ, ಇನ್ನೊಂದೆಡೆ ತೊಟ್ಟಿಯಲ್ಲಿ ಮುಳುಗಿರುವ ಮೂಳೆಗಳು ಶಿಥಿಲವಾಗದೇ ಹೊರಬಂದಿವೆ. ಕುಂಡಗಳಲ್ಲಿ ಬಿದ್ದಿರುವ ಮೂಳೆಗಳ ಮೇಲೆ ಸೂರ್ಯನ ಕಿರಣಗಳು ಬೀಳದ ಕಾರಣ ಅವು ಶಿಥಲಗೊಂಡಿಲ್ಲ. ಈ ಭಾಗದಲ್ಲಿ ಮನುಷ್ಯನ ಮೃತದೇಹಗಳ ಅಸ್ಥಿ ವಿಸರ್ಜನೆ ನಡೆಯುತ್ತದೆ. ಇದರಿಂದ ಮೂಳೆಗಳ ತ್ಯಾಜ್ಯ ಸಂಗ್ರಹವಾಗುತ್ತಲೇ ಹೋಗುತ್ತಿದೆ. ಇದಕ್ಕೆ ಯಾವ ರೀತಿ ಕಡಿವಾಣ ಹಾಕಬೇಕು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ.
ಅಸ್ಥಿಗಳನ್ನು ಹೂಳಲು ರಾಮಕುಂಡ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಅದೇ ಸ್ಥಳದಲ್ಲಿ ಮೂಳೆಗಳನ್ನು ವಿಲೇವಾರಿ ಮಾಡಿದರೆ ಅವು ಶಿಥಿಲವಾಗುತ್ತವೆ. ಆದ್ದರಿಂದ ಸೂಕ್ತ ಸ್ಥಳದಲ್ಲೇ ಹೂಳಬೇಕು ಎಂದು ಪುರೋಹಿತ ಸಂಘ ಸ್ಪಷ್ಟಪಡಿಸಿದೆ.
ಗೋದಾವರಿ ನದಿಯ ಜಲಾನಯನ ಪ್ರದೇಶದ ತಳಭಾಗಕ್ಕೆ ಸಿಮೆಂಟ್ ಕಾಂಕ್ರಿಟ್ ಮಾಡಲಾಗಿದೆ. ಈ ತೊಟ್ಟಿಯಲ್ಲಿ ರಾಸಾಯನಿಕ ಸಂಸ್ಕರಣೆ ಇಲ್ಲದಿರುವುದರಿಂದ ಮೂಳೆಗಳು ಕೊಳೆಯುತ್ತಿಲ್ಲ. ತೊಟ್ಟಿ ಶುಚಿಗೊಳಿಸುವ ಹೆಸರಿನಲ್ಲಿ ಇಲ್ಲಿ ನಿತ್ಯವೂ ಮೂಳೆ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತಿದೆ. ಇದು ಭಕ್ತರ ನಂಬಿಕೆಯ ಮೇಲಿನ ಆಟ. ಇದನ್ನು ತಡೆಯಬೇಕಾದರೆ ರಾಮಕುಂಡದಿಂದ ಕಾಂಕ್ರಿಟ್ ತೆಗೆಯುವುದು ಅವಶ್ಯಕ ಎಂದು ಗೋದಾವರಿ ಪ್ರೇಮಿ ಸಮಿತಿ ಅಧ್ಯಕ್ಷ ದೇವಾಂಗ ಜಾನಿ ಆಗ್ರಹಿಸಿದರು.
ಪೌರಾಣಿಕ ಹಿನ್ನೆಲೆ: ರಾಮಚಂದ್ರನು ತನ್ನ ತಂದೆ ದಶರಥನ ಅಸ್ಥಿಯನ್ನು ಇದೇ ನಾಸಿಕ್‌ನ ಗೋದಾವರಿ ನದಿಯಲ್ಲಿ ವಿಸರ್ಜಿಸಿದ್ದಾನೆ ಎಂಬ ನಂಬಿಕೆಯಿದೆ. ಅಸ್ಥಿಗಳನ್ನು ಗೋದಾವರಿ ನದಿಯಲ್ಲಿ ವಿಸರ್ಜಿಸಿದರೆ ಸತ್ತವರ ಆತ್ಮಕ್ಕೆ ಶಾಂತಿ ಮತ್ತು ಮರುಜನ್ಮ ಸಿಗುತ್ತದೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ. ದೇಶದಾದ್ಯಂತ ಸಾವಿರಾರು ಭಕ್ತರು ವರ್ಷವಿಡೀ ನಾಸಿಕ್‌ನ ಪವಿತ್ರ ಗೋದಾವರಿ ನದಿಯಲ್ಲಿ ಅಸ್ಥಿ ವಿಸರ್ಜಿಸಲು ಬರುತ್ತಾರೆ. ನದಿಯಲ್ಲಿ ಈವರೆಗೂ ಪ್ರಸಿದ್ಧ ರಾಜಕೀಯ ನಾಯಕರು, ಉದ್ಯಮಿಗಳು, ವ್ಯಾಪಾರಿಗಳು, ಕಲಾವಿದರ ಅಸ್ಥಿಗಳನ್ನು ಬಿಡಲಾಗಿದೆ ಎಂದು ಪುರೋಹಿತ್ ಸಂಘದ ಅಧ್ಯಕ್ಷ ಸತೀಶ್ ಶುಕ್ಲಾ ತಿಳಿಸಿದರು.
ಇದನ್ನೂ ಓದಿ:ಬೇಕಾ ಫೋನ್ ನಂಬರ್? ಕಿರುಕುಳ ನೀಡಿದ ಹುಡುಗನಿಗೆ ಬಿತ್ತು ಧರ್ಮದೇಟು- ವಿಡಿಯೋ