ಮಹಾರಾಷ್ಟ್ರ: ಕಾಮ್ರೇಡ್ ದತ್ತ ಸಾಮಂತ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶ ಎ. ಎಂ ಪಾಟೀಲ್ ಅವರು, ದತ್ತಾ ಸಾಮಂತ್ ಕೊಲೆಗೆ ಸಂಬಂಧಿಸಿದಂತೆ ಛೋಟಾ ರಾಜನ್‌ನನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿದ್ದಾರೆ.
17 ಸುತ್ತು ಗುಂಡು ಹಾರಿಸಿದ್ದ ದುಷ್ಕರ್ಮಿಗಳು: ಜನವರಿ 16, 1997ರಂದು ಡಾ. ದತ್ತಾ ಸಾಮಂತ್ ಅವರು ಜೀಪ್‌ನಲ್ಲಿ ಪೊವಾಯಿಯಿಂದ ಘಾಟ್‌ಕೋಪರ್‌ಗೆ ಹೋಗುತ್ತಿದ್ದಾಗ ಪದ್ಮಾವತಿ ರಸ್ತೆಯಲ್ಲಿ ಅವರನ್ನು ನಾಲ್ವರು ಗುಂಡಿಕ್ಕಿ ಕೊಂದಿದ್ದರು. ಪೊಲೀಸರ ಪ್ರಕಾರ, ಮೋಟಾರು ಸೈಕಲ್‌ಗಳಲ್ಲಿ ಬಂದ ನಾಲ್ವರು ದಾಳಿಕೋರರು ಸಮಂತ್ ಅವರ ಜೀಪ್ ಅಡ್ಡಗಟ್ಟಿ ಕನಿಷ್ಠ 17 ಸುತ್ತು ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಮಂತ್‌ನನ್ನು ತಕ್ಷಣವೇ ಹತ್ತಿರದ ಅನಿಕೇತ್ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಇದಾದ ನಂತರ ಪೊಲೀಸರು ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದರು ಮತ್ತು ಪ್ರಕರಣವು ಕೆಳ ನ್ಯಾಯಾಲಯದಿಂದ ಸಿಬಿಐ ನ್ಯಾಯಾಲಯದವರೆಗೆ ಹೋಯಿತು.
ಸಾಕ್ಷ್ಯಾಧಾರಗಳ ಕೊರತೆಯಿಂದ ಛೋಟಾ ರಾಜನ್ ಖುಲಾಸೆ: ಅಂತಿಮವಾಗಿ ಕಾಮ್ರೇಡ್ ದತ್ತ ಸಾಮಂತ್ ಪ್ರಕರಣವನ್ನು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಮತ್ತು ಸಿಬಿಐನ ವಿಶೇಷ ನ್ಯಾಯಾಲಯವು ಅದರಲ್ಲಿ ಹಲವು ಸತ್ಯ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುವ ಕೆಲಸವನ್ನು ಮಾಡಿತು. ಆದರೆ "ಛೋಟಾ ರಾಜನ್ ಕಾಮ್ರೇಡ್ ದತ್ತಾ ಸಾಮಂತ್ ಅವರನ್ನು ಕೊಂದಿದ್ದಾರೆ ಎಂಬುದನ್ನು ಬೆಂಬಲಿಸುವ ಬಲವಾದ ಸಾಕ್ಷ್ಯವನ್ನು ಯಾವುದೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ." ಹಾಗಾಗಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ನಿಕಾಲ್ಜೆ ಅವರನ್ನು ಸಿಬಿಐ ಕೋರ್ಟ್ ವಿಶೇಷ ನ್ಯಾಯಾಧೀಶ ಎ. ಎಂ ಪಾಟೀಲ್ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.