ನವದೆಹಲಿ:ಹೊಸ ಸಂಸತ್ತು ಭವನದಲ್ಲಿ ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು. ಅಲ್ಲದೇ, ಈ ವಿಷಯದ ಬಗ್ಗೆ ತಮ್ಮ ಕಳವಳಗಳನ್ನು ತಿಳಿಸಲು ಸರ್ವ ಪಕ್ಷಗಳ ಸಂಸದರ ಸಭೆಯನ್ನು ಸ್ಪೀಕರ್ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ. ಇದೇ ವೇಳೆ, ಸದನಕ್ಕೆ ನುಗ್ಗಿದ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಹಳೆ ಸಂಸತ್ತು ಭವನದ ಮೇಲಿನ ಭಯೋತ್ಪಾದನಾ ದಾಳಿಯ 22ನೇ ವರ್ಷದ ಕರಾಳ ದಿನದಂದೇ ಲೋಕಸಭೆಯಲ್ಲಿ ಈ ಭಾರಿ ಭದ್ರತಾ ಲೋಪ ಉಂಟಾಗಿದೆ. ಸುಮಾರು 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸದಸ್ಯರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾರೆ. ಹಳದಿ ಬಣ್ಣದ ಸ್ಟ್ರೇ ಬಿಡುಗಡೆ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೆ ಒಬ್ಬ ಮಹಿಳೆ ಸೇರಿದಂತೆ ಮತ್ತಿಬ್ಬರು ಘೋಷಣೆಗಳನ್ನು ಕೂಗುತ್ತಾ ಸ್ಟ್ರೇ ಮಾಡಿದ್ದಾರೆ.
ನಾಲ್ವರ ಬಂಧನ- ಸದನಕ್ಕೆ ಸ್ಪೀಕರ್ ಮಾಹಿತಿ:ಈ ಘಟನೆ ಬಳಿಕ ಮಧ್ಯಾಹ್ನ 2 ಗಂಟೆಗೆ ಮತ್ತೆ ಕಲಾಪ ಸೇರಲಾಯಿತು. ಆಗ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಇಬ್ಬರನ್ನು ಸದನದ ಒಳಗೆ ಹಾಗೂ ಮತ್ತಿಬ್ಬರನ್ನು ಸಂಸತ್ತಿನ ಹೊರಗೆ ಬಂಧಿಸಲಾಗಿದೆ. ಈ ಬಗ್ಗೆ ಲೋಕಸಭೆಯು ತನಿಖೆ ನಡೆಸುತ್ತಿದೆ. ಜೊತೆಗೆ ದೆಹಲಿ ಪೊಲೀಸರಿಗೂ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸದನದ ಒಳಗೆ ನುಗ್ಗಿದ್ದ ಒಬ್ಬರು ಬಿಡುಗಡೆ ಮಾಡಿದ ಅನಿಲವು ನಿರುಪದ್ರವ ಎಂದು ಕಂಡುಬಂದಿದೆ. ಇದು ಸಂಚಲನ ಸೃಷ್ಟಿಸಲು ಸಿಂಪಡಿಸಿದಂತೆ ತೋರುತ್ತಿದೆ ಎಂದು ಸ್ಪೀಕರ್ ಹೇಳಿದರು. ನಮ್ಮ ಆತಂಕಕ್ಕೆ ಕಾರಣವಾದ ಹೊಗೆಯು ಕಳವಳಕಾರಿಯಾದ ವಿಷಯವಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರಿಬ್ಬರನ್ನೂ ಬಂಧಿಸಿ, ಅವರ ಬಳಿಯಿದ್ದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.