ನವದೆಹಲಿ:ಮಣಿಪುರದ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳ ಗದ್ದಲದ ನಡುವೆ ಅಪರೂಪದ ನಗುವಿಗೆ ಸಂಸತ್ತು ಗುರುವಾರ ಸಾಕ್ಷಿಯಾಗಿದೆ. ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನ ವಿಪಕ್ಷಗಳ ಪ್ರತಿಭಟನೆ, ಕೋಲಾಹಲ, ಪದೇ ಪದೇ ಅಡ್ಡಿಪಡಿಸುವುದರಿಂದಾಗಿ ಇಲ್ಲಿಯವರೆಗೂ ಸರಿಯಾಗಿ ಕಲಾಪ ನಡೆಯದೇ ಮುಂದೂಡಲಾಗುತ್ತಿದೆ. ಈ ಮಧ್ಯೆ ನಿನ್ನೆ ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾಪತಿ ಜಗದೀಪ್ ಧನಕರ್ ನಡುವೆ ಕೋಪದ ವಿಚಾರಕ್ಕೆ ಸ್ವಾರಸ್ಯಕರ ಪ್ರಸಂಗ ನಡೆಯಿತು.
ಸದನದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, " ಸಭಾಪತಿಯವರು ಪ್ರತಿಪಕ್ಷಗಳ ಮೇಲೆ ಕೋಪಗೊಂಡಂತೆ ಕಾಣುತ್ತಿದ್ದಾರೆ (ಆಪ್ ಜರಾ ಗುಸ್ಸೆ ಮೇ ದಶಾಯದ್). ಸಭಾಪತಿಯವರು ನನಗೆ ಮಾತನಾಡಲು ಅವಕಾಶ ನೀಡಿ ಮತ್ತೆ ಎರಡು ಸೆಕೆಂಡ್ಗಳಲ್ಲಿ ನನ್ನನ್ನು ಕುಳಿತುಕೊಳ್ಳಲು ಹೇಳುತ್ತೀರಿ. ಇದು ಮತ್ತೆ ಮತ್ತೆ ನಡೆಯುತ್ತಿದೆ, ಯಾಕೆ ಎಂದು ಗೊತ್ತಿಲ್ಲ.
ನೀವು ನನಗೆ ಸೂಚಿಸಿದಂತೆ 176 ನೋಟಿಸ್ ನೀಡಲಾಗಿದ್ದು, ಅದೇ ದಿನ 267 ನೋಟಿಸ್ ನೀಡಲಾಗಿದೆ. ಆದರೆ, ನಿಯಮ 267 ರ ಅಡಿಯಲ್ಲಿ ಮಾಡುವಂತಾ ಚರ್ಚೆ ಪ್ರತಿಷ್ಠೆಯ ವಿಷಯವಾಗಿ ಏಕೆ ಮಾರ್ಪಾಡಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. 267 ನೇ ನಿಯಮದ ಅಡಿಯಲ್ಲಿ ಚರ್ಚೆ ನಡೆಸಲು ಒಂದು ಕಾರಣ ಇರಬೇಕು ಎಂದು ನೀವು ಹೇಳಿದ್ದೀರಿ, ನಾನು ನಿಮಗೆ ಕಾರಣವನ್ನು ಹೇಳಿದೆ. ನಿನ್ನೆಯೇ ನಿಮ್ಮಲ್ಲಿ ವಿನಿಂತಿಸಿದ್ದೆ ಕೂಡ. ಆದರೆ ನೀವು ಕೋಪದಲ್ಲಿ ಇದ್ದೀರಿ ಎಂದು ಖರ್ಗೆ ಹೇಳಿದ್ದಾರೆ. ಆಗ ಖರ್ಗೆ ಮಾತಿಗೆ ಪ್ರತಿಕ್ರಿಯಿಸಿದ ಸಭಾಪತಿ ಜಗದೀಪ್ ಧನಕರ್ ಹಾಸ್ಯ ಚಟಾಕಿ ಸಿಡಿಸಿ ಸದನವನ್ನು ನಗೆ ಗಡಲಿಲ್ಲ ತೇಲಿಸಿದರು.