ಮ್ಯಾಡ್ರಿಡ್ (ಸ್ಪೇನ್):ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮೂರು ದಶಕಗಳಿಂದ ಯಾರೂ ವಾಸಿಸದ ಸ್ಪೇನ್ ದೇಶದ ಸಂಪೂರ್ಣ ಗ್ರಾಮವೊಂದನ್ನು 2 ಕೋಟಿ ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಪೋರ್ಚುಗಲ್‌ನ ಗಡಿಯಲ್ಲಿರುವ ಸ್ಪೇನ್‌ನ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು 2,27,000 ಯುರೋಗಳಿಗೆ (ಸುಮಾರು ರೂ. 2 ಕೋಟಿ 16 ಲಕ್ಷ) ಮಾರಾಟಕ್ಕಿದೆ ಎಂದು ಸ್ಪಾನಿಷ್ ಪ್ರಾಪರ್ಟಿ ರಿಟೇಲ್ ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ ಪಟ್ಟಿಮಾಡಲಾಗಿದೆ.
44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಬ್ಯಾರಕ್‌ಗಳ ಕಟ್ಟಡವನ್ನು ಹೊಂದಿರುವ ಗ್ರಾಮವು ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆಯಿತ್ತು. ಆದರೆ ಯೂರೋಜೋನ್ ಬಿಕ್ಕಟ್ಟಿನಿಂದಾಗಿ ಇದು ಕಾರ್ಯರೂಪಕ್ಕೆ ಬರಲಿಲ್ಲ. ಮಾರಾಟಕ್ಕಿರುವ ಗ್ರಾಮವು ಮ್ಯಾಡ್ರಿಡ್‌ನಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ.