ದೆಹಲಿ:ಸೆ.9 ಹಾಗೂ 10ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ.
'ಗುರುವಾರ ಕೋವಿಡ್ ಸೋಂಕು ದೃಢಪಟ್ಟಿದೆ. ನನ್ನ ಆರೋಗ್ಯ ಉತ್ತಮವಾಗಿದೆ. ಉಪಾಧ್ಯಕ್ಷ ನಾಡಿಯಾ ಹಾಗೂ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಶೃಂಗಸಭೆಯಲ್ಲಿ ಸ್ಪೇನ್ ಅನ್ನು ಪ್ರತಿನಿಧಿಸಲಿದ್ದಾರೆ' ಎಂದು ಪೆಡ್ರೊ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಶೃಂಗಸಭೆಯಿಂದ ದೂರ ಉಳಿದಿರುವ 3ನೇ ವಿಶ್ವ ನಾಯಕ ಇವರಾಗಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೃಂಗದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಜಿ20 ಶೃಂಗಸಭೆಯಲ್ಲಿ ಎಲ್ಲಾ ಜಿ20 ದೇಶಗಳು ಮತ್ತು 9 ಇತರ ರಾಜ್ಯಗಳ ನಾಯಕರು (ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ್, ಸ್ಪೇನ್ ಮತ್ತು ಯುಎಇ) ಭಾಗವಹಿಸಲಿದ್ದಾರೆ. ಯುರೋಪಿಯನ್ ಒಕ್ಕೂಟದ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳು, ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಅಮೆರಿಕದಿಂದ ಹೊರಟಿದ್ದು, ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಗೆ ಬಂದಿಳಿಯಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:G20 Summit: ಜಿ20 ಶೃಂಗದಲ್ಲಿ ಭಾಗಿಯಾಗಲು ಭಾರತಕ್ಕೆ ಪ್ರಯಾಣಿಸಿದ ಅಮೆರಿಕ ಅಧ್ಯಕ್ಷ ಬೈಡನ್
'ವಿಶ್ವವೇ ನಮ್ಮ ಕುಟುಂಬ':ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಕ್ಕೆ ಭಾರತದ 'ವಸುಧೈವ ಕುಟುಂಬಕಂ' ಸಂಸ್ಕೃತಿಯ ಸಂದೇಶ ನೀಡಿದ್ದಾರೆ. ಈ ಬಗ್ಗೆ ಸುದೀರ್ಘ ಲೇಖನವೊಂದನ್ನು ಬರೆದಿದ್ದಾರೆ.
'ವಸುಧೈವ ಕುಟುಂಬಕಂ'- ಎಂಬೆರಡು ಪದಗಳು ತತ್ವಶಾಸ್ತ್ರದ ಆಳವಾದ ಅರ್ಥ ಹೊಂದಿವೆ. ಇದರರ್ಥ 'ಇಡೀ ಜಗತ್ತೇ ಒಂದು ಕುಟುಂಬ'. ವಸುಧೈವ ಕುಟುಂಬಕಂ ಎಂಬುದು ಸರ್ವವ್ಯಾಪಿ ದೃಷ್ಟಿಕೋನ. ಇದು ಗಡಿ, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಒಂದು ವಿಶ್ವ ಕುಟುಂಬವಾಗಿ ಪ್ರಗತಿ ಸಾಧಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. 'ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ, ಇದು ಮಾನವ ಕೇಂದ್ರಿತ ಪ್ರಗತಿಯ ಕರೆಯಾಗಿ ಮಾರ್ಪಟ್ಟಿದೆ. ಒಂದು ಕುಟುಂಬವಾಗಿ ನಮ್ಮ ಮನೆಯನ್ನು ಪೋಷಿಸಲು ನಾವೆಲ್ಲರೂ ಒಗ್ಗೂಡುತ್ತಿದ್ದೇವೆ. ಒಂದು ಕುಟುಂಬವಾಗಿ, ಬೆಳವಣಿಗೆಯ ಅನ್ವೇಷಣೆಯಲ್ಲಿ ನಾವು ಪರಸ್ಪರ ಬೆಂಬಲಿಸುತ್ತೇವೆ. ಒಂದು ಭವಿಷ್ಯ- ಅಂದರೆ ಎಲ್ಲರ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಸಾಗುತ್ತೇವೆ. ಪರಸ್ಪರ ಬೆಸೆದ ಜಗತ್ತಿನಲ್ಲಿ ಇಂದು ಇದು ನಿರಾಕರಿಸಲಾಗದ ಸತ್ಯವಾಗಿದೆ'- ಪ್ರಧಾನ ಮಂತ್ರಿ ನರೇಂದ್ರ ಮೋದಿ.
ಏನಿದು ಜಿ20?:ಗ್ರೂಪ್ ಆಫ್ 20 ಅಥವಾ ಜಿ20, 19 ದೇಶಗಳನ್ನು ಮತ್ತು ಒಂದು ಒಕ್ಕೂಟವನ್ನು ಒಳಗೊಂಡಿದೆ. ಅವುಗಳಲ್ಲಿ ಭಾರತ, ಚೀನಾ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಸೇರಿವೆ. ಈ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ. ಜಾಗತಿಕ ವ್ಯಾಪಾರದ ಶೇ.75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು 3ನೇ 2ರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ:ಜಿ20 ಶೃಂಗಸಭೆ: 'ವಿಶ್ವವೇ ನಮ್ಮ ಕುಟುಂಬ' - ಜಗತ್ತಿಗೆ ಪ್ರಧಾನಿ ಮೋದಿ ಸಂದೇಶ