ತಿರುವನಂತಪುರಂ(ಕೇರಳ): ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಗುರುವಾರ ಕೇರಳಕ್ಕೆ ಮುಂಗಾರು ಆಗಮನವನ್ನು ಅಧಿಕೃತವಾಗಿ ಘೋಷಿಸಿದೆ. ಗುರುವಾರದ ಹೇಳಿಕೆಯಲ್ಲಿ ಐಎಂಡಿ "ನೈಋತ್ಯ ಮಾನ್ಸೂನ್ ಜೂನ್ 8 ರಂದು ಕೇರಳದಲ್ಲಿ ಪ್ರಾರಂಭವಾಗಿದೆ" ಎಂದು ಹೇಳಿದೆ. "ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳು, ಮನ್ನಾರ್ ಕೊಲ್ಲಿ ಮತ್ತು ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಮಾನ್ಸೂನ್ ಆರಂಭವಾಗಿದೆ" ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
'ನಿಧಿ ಬೇಟೆ' ಆರಂಭಿಸಿದ ಮೀನುಗಾರರು:ನೈಋತ್ಯ ಮಾನ್ಸೂನ್ ಪ್ರವೇಶ ಮಾಡುತ್ತಿರುವಂತೆಯೇ ಅರಬ್ಬಿ ಸಮುದ್ರ ಬಿರುಗಾಳಿಯಿಂದ ಆವರಿಸಿದೆ. ಇಂದಿನಿಂದ (ಜೂ.9) ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿದೆ. ಇದರಿಂದ ಪರ್ಯಾಯ ಜೀವನೋಪಾಯಕ್ಕಾಗಿ ಕೇರಳ ಕರಾವಳಿಯ ಮೀನುಗಾರರಿಗೆ ದಡದಲ್ಲಿಯೇ ಇದ್ದು 'ನಿಧಿ ಬೇಟೆ' ಆರಂಭಿಸಿದ್ದಾರೆ. ರಾಜ್ಯದ ಕರಾವಳಿ ನೀರಿನಲ್ಲಿ ಮೀನುಗಾರಿಕೆ ನಿಷೇಧ ಜಾರಿಗೆ ಬರುವ ಮುನ್ನಾದಿನದಂದು, ಬೈಪರ್‌ಜೋಯ್ ಚಂಡಮಾರುತದಿಂದ ಈಗಾಗಲೇ ನಿರುದ್ಯೋಗಿಯಾಗಿರುವ ಮೀನುಗಾರರು 'ನಿಧಿ ಬೇಟೆ' ಮೂಲಕ ಪರ್ಯಾಯ ಆದಾಯದ ಮೂಲವನ್ನು ಹುಡುಕಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ತಿರುವನಂತಪುರಂನ ಶಾಂಗುಮುಖಂ ಕಡಲತೀರದಲ್ಲಿ ಬೃಹತ್ ಅಲೆಗಳನ್ನು ಲೆಕ್ಕಿಸದೇ, ನಾಣ್ಯಗಳು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳಿಗಾಗಿ ಹಲವಾರು ಮೀನುಗಾರರು ದಡವನ್ನು ಹುಡುಕುತ್ತಿದ್ದರು. ಅನೇಕರು ಈಗಾಗಲೇ ಸರಪಳಿಗಳು, ಪೆಂಡೆಂಟ್‌ಗಳು ಮತ್ತು ಕಿವಿಯೋಲೆಗಳ ರೂಪದಲ್ಲಿ ಚಿನ್ನವನ್ನು ಪಡೆದಿದ್ದಾರೆ. "ಮಳೆ (ಮುಂಗಾರು) ಪ್ರಾರಂಭವಾದಾಗ, ಸಮುದ್ರವು ಪ್ರಕ್ಷುಬ್ಧವಾಗುತ್ತದೆ. ಅದರ ತೀರದ ಮೇಲೆ ಎಲ್ಲವನ್ನೂ ಹೊರಹಾಕುತ್ತದೆ. ಆದ್ದರಿಂದ ನಮಗೆ ಹಣ ಸಿಗುತ್ತದೆ. ಈ ಸಮಯದಲ್ಲಿ ಏನನ್ನೂ ಗಳಿಸಲು ಬೇರೆ ಮಾರ್ಗವಿಲ್ಲ" ಎಂದು ಸ್ಥಳೀಯ ಮೀನುಗಾರ ಸಿರಿಲ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ದಡಕ್ಕೆ ಅಪ್ಪಳಿಸುತ್ತಿರುವ ಅಲೆಗಳ ನಡುವೆ ಮರಳಿನಿಂದ ಎತ್ತಿದ 10 ರೂಪಾಯಿ ನಾಣ್ಯವನ್ನು ತೋರಿಸಿದ ಮೀನುಗಾರ, "ಕೆಲವು ವರ್ಷಗಳ ಹಿಂದೆ ನಾವು ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪಡೆಯುತ್ತಿದ್ದೆವು. ಆದರೆ, ಕೊರೊನಾ ಸಾಂಕ್ರಾಮಿಕದ ನಂತರ ನಾವು ಕೇವಲ ನಾಣ್ಯಗಳು ಸಿಗುತ್ತಿವೆ" ಎಂದು ಹೇಳಿದರು. "ನನಗೆ ಮೊನ್ನೆ 67 ರೂಪಾಯಿ ಸಿಕ್ಕಿತು" ಎಂದು ಇನ್ನೊಬ್ಬ ಮೀನುಗಾರ ಆಂಟೋನಿ ಕ್ಸೇವಿಯರ್ ಹೇಳಿಕೊಂಡಿದ್ದಾರೆ.
ಸಮುದ್ರಕ್ಕೆ ಇಳಿಯದಂತೆ ಸೂಚನೆ:ಕೇರಳ ಸರ್ಕಾರ ಜೂನ್ 9ರ ಮಧ್ಯರಾತ್ರಿಯಿಂದ ಜುಲೈ 31 ರ ಮಧ್ಯರಾತ್ರಿಯವರೆಗೆ ರಾಜ್ಯದ ಕರಾವಳಿ ನೀರಿನಲ್ಲಿ ಮೀನುಗಾರಿಕೆ ನಿಷೇಧವನ್ನು ಘೋಷಿಸಿದೆ. ರಾಜ್ಯದ ಬಿಪರ್‌ಜೋಯ್ ಚಂಡಮಾರುತದಿಂದ ಸಮುದ್ರದ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
3.5 ಮೀಟರ್ ಎತ್ತರದವರೆಗೆ ಬೃಹತ್ ಅಲೆಗಳು ಏಳುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ. ಸಣ್ಣ ಕ್ಯಾಟಮರನ್‌ಗಳು ಮತ್ತು ಯಾಂತ್ರೀಕೃತವಲ್ಲದ ದೋಣಿಗಳನ್ನು ಅವಲಂಬಿಸಿರುವ ಮೀನುಗಾರರು ಮೀನು ಹಿಡಿಯುವ ಮೂಲಕ ಆದಾಯ ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾದಾಗ ನಿಧಿ ಹುಡುಕಾಟಕ್ಕೆ ಹೋಗುತ್ತಾರೆ.