ಶಹಜಹಾನ್‌ಪುರ (ಉತ್ತರ ಪ್ರದೇಶ):ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ರಾಜಸ್ಥಾನದ ಸಚಿನ್ ಮೀನಾರನ್ನು ವಿವಾಹವಾದ ಬಳಿಕ, ವಿದೇಶಗಳಿಂದ ಬಂದು ಭಾರತದ ಯುವಕರೊಂದಿಗೆ ವಿವಾಹವಾಗುವ ಪ್ರಕರಣಗಳು ಹೆಚ್ಚಾಗಿವೆ. ಈಗ ಅಂಥದ್ದೇ ಮತ್ತೊಂದು ಕೇಸ್ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಯುವತಿ ಬಂದಿದ್ದು ದಕ್ಷಿಣ ಕೊರಿಯಾದಿಂದ. ಪಂಜಾಬಿ ಮೂಲದ ಯುವಕನ ಜೊತೆ ಹಸೆಮಣೆ ಏರಿದ್ದಾರೆ.
ಉತ್ತರ ಪ್ರದೇಶದ ಶಹಜಹಾನ್‌ಪುರದ ನಿವಾಸಿ ಸುಖ್‌ಜಿತ್ ಸಿಂಗ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಬೋಹ್ ನಿ ವಿವಾಹವಾದ ಜೋಡಿ. ಈಕೆ ತಾನು ಪ್ರೀತಿಸಿದ ಯುವಕನಿಗಾಗಿ ದೂರದ ಕೊರಿಯಾದಿಂದ 3 ತಿಂಗಳ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಹಾರಿ ಬಂದಿದ್ದಾರೆ. ಪಂಜಾಬಿ ಪದ್ಧತಿಯಂತೆ ಇಬ್ಬರೂ ಮದುವೆಯಾಗಿದ್ದು, ಪ್ರಸ್ತುತ ಶಹಜಹಾನ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದಾರೆ.
ಕಾಫಿ ಶಾಪಲ್ಲಿ ಮೊಳೆತ ಪ್ರೀತಿ:ಯುವಕ ಸುಖ್‌ಜಿತ್ ಸಿಂಗ್ 4 ವರ್ಷಗಳ ಹಿಂದೆ ಉದ್ಯೋಗ ಅರಸಿ ದಕ್ಷಿಣ ಕೊರಿಯಾಕ್ಕೆ ತೆರಳಿದ್ದರು. ಬುಸಾನ್ ನಗರದ ಕಾಫಿ ಶಾಪ್‌ನಲ್ಲಿ ಬಿಲ್ಲಿಂಗ್ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಆಗ 23 ವರ್ಷದ ಕಿಮ್ ಬೋಹ್ ನಿ ಅವರ ಪರಿಚಯವಾಗಿದೆ. ಕಿಮ್ ಅದೇ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ.
ಇದಾದ ಬಳಿಕ ಸುಖಜಿತ್ 6 ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದರು. ಬಳಿಕವೂ ಸಂಪರ್ಕದಲ್ಲಿದ್ದ ಇಬ್ಬರೂ, ವಿವಾಹವಾಗಲು ಒಪ್ಪಿಕೊಂಡಿದ್ದಾರೆ. ದೂರದ ದಕ್ಷಿಣ ಕೊರಿಯಾದಿಂದ ಕಿಮ್ ಭಾರತಕ್ಕೆ ಒಂದೂವರೆ ತಿಂಗಳ ಹಿಂದೆ ಬಂದಿದ್ದಾರೆ. ಬಳಿಕ ದೆಹಲಿಯಲ್ಲಿನ ತನ್ನ ಗೆಳತಿಯ ಸಹಾಯದಿಂದ ಉತ್ತರಪ್ರದೇಶದ ತನ್ನ ಗೆಳೆಯನನ್ನು ಹುಡುಕಿಕೊಂಡು ತೆರಳಿದ್ದಾರೆ.