ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶದಲ್ಲಿ ಬೌದ್ಧಧರ್ಮವು ದೊಡ್ಡ ಪ್ರಮಾಣದಲ್ಲಿ ಪುನರುಜ್ಜೀವನ ಕಂಡಿದೆ. ಜಾಗತಿಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ದೇಶವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ, ವೇಗವಾಗಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶ್ವದ ಮೂರು ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಮುನ್ನುಗ್ಗಲಿದೆ ಎಂದು ದಕ್ಷಿಣ ಕೊರಿಯಾದ ಉನ್ನತ ಬೌದ್ಧ ಸನ್ಯಾಸಿಯೊಬ್ಬರು ಶುಕ್ರವಾರ ಹೇಳಿದರು.
ವೆಂ. ಜಂಗ್ಟೋ ಸೊಸೈಟಿಯ ಅಧ್ಯಕ್ಷ ಮತ್ತು ದಕ್ಷಿಣ ಕೊರಿಯಾದ ಗೈಡಿಂಗ್ ಧರ್ಮ ಮಾಸ್ಟರ್ನ ಸಂಸ್ಥಾಪಕ ಪೊಮ್ನ್ಯುನ್ ಸುನಿಮ್ ಅವರು ಬೌದ್ಧ ಧರ್ಮದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಣಯಗಳನ್ನು ಶ್ಲಾಘಿಸಿದರು. "ಈಟಿವಿ ಭಾರತ"ದೊಂದಿಗೆ ಭಾರತದ ವಿದೇಶಾಂಗ ನೀತಿಯಲ್ಲಿ ಬೌದ್ಧಧರ್ಮದ ಪ್ರಾಮುಖ್ಯತೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಜೊತೆಗೆ ದೇಶದಲ್ಲಿ ಬೌದ್ಧಧರ್ಮ ದೊಡ್ಡ ಮಟ್ಟದಲ್ಲಿ ಪುನರುಜ್ಜೀವನ ಕಂಡಿದೆ.
2000 ವರ್ಷಗಳ ಹಿಂದೆ ಬೌದ್ಧ ಧರ್ಮವು ಭಾರತದಿಂದ ಸಮುದ್ರ ಮಾರ್ಗದ ಮೂಲಕ ಕೊರಿಯಾ ತಲುಪಿತು. ನಾವು ಬುದ್ಧನ ಬೋಧನೆಗಳ ಪ್ರಕಾರ ಬದುಕಿದರೆ ಜಾಗತಿಕ ಪರಿಸರ ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಬಹುದು ಎಂದರು.
‘Responses to Contemporary challenges: Philosophy to Praxis’ ಎಂಬ ವಿಷಯದಡಿ ಭಾರತದ ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಏಪ್ರಿಲ್ 20-21 ರವರೆಗೆ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಭಾಗವಹಿಸಿದ ಬೌದ್ಧ ವಿದ್ವಾಂಸ ಪೊಮ್ನ್ಯುನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.