ಮುಂಬೈ: ಕೋವಿಡ್ ನಡುವೆ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಮೂಲಕ ಜನಮನ ಗೆದ್ದಿರುವ ನಟ ಸೋನು ಸೂದ್, ತನ್ನ ಹೆಸರು ಬಳಸಿಕೊಂಡು ಹಣ ಮಾಡುವ ನಕಲಿ ಸಂಘ, ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನನ್ನ ಹೆಸರು ಬಳಸಿಕೊಂಡು ಹಣ ಮಾಡುತ್ತಿರುವ ಕೆಲವೊಂದು ಸಂಘ ಸಂಸ್ಥೆಗಳಿವೆ. ಅವುಗಳಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
'ಸೋನು ಸೂದ್ ಫೌಂಡೇಶನ್' ಎಂಬ ಹೆಸರಿನಲ್ಲಿರುವ ಸಂಸ್ಥೆಯೊಂದರ ಪೋಸ್ಟರ್ ಅನ್ನು ಸೂದ್ ಅವರು ಟ್ವೀಟ್ ಮಾಡಿದ್ದು, ಇದು ನಕಲಿ ಸಂಸ್ಥೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ರೀತಿ ಯಾರಾದರು ದುಡ್ಡು ಕೇಳಿದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆಯೂ ಅವರು ತಿಳಿಸಿದ್ದಾರೆ.
ಕಳೆದ ಬಾರಿ ಕೋವಿಡ್ ಒಂದನೇ ಅಲೆಯ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ಊರು ಸೇರಲು ಸೋನು ಸಹಾಯ ಮಾಡಿದ್ದರು. ಈ ಬಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್, ಬೆಡ್, ಔಷಧಿಗಳನ್ನು ಒದಗಿಸುವ ಮೂಲಕ ಅವರು ಸಹಾಯಹಸ್ತ ಚಾಚಿದ್ದಾರೆ.