ಉಜ್ಜಯಿನಿ (ಮಧ್ಯಪ್ರದೇಶ):ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ರಿಯಲ್ ಲೈಫ್ ಹೀರೋ ಆಗಿ ಮಿಂಚುತ್ತಿರುವ ಬಾಲಿವುಡ್ ನಟ, ನಿರ್ಮಾಪಕ ಹಾಗೂ ಸೆಲೆಬ್ರಿಟಿ ಸೋನು ಸೂದ್ ಇದೀಗ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸಾಹಯ ಹಸ್ತ ಚಾಚಿದ್ದಾರೆ.
ಪತ್ನಿ ಸೋನಾಲಿಯೊಂದಿಗೆ ಶುಕ್ರವಾರ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದ ಸೋನು ಸೂದ್, ಬಳಿಕ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವನ್ನು ಭೇಟಿ ಮಾಡಿ, ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ಉಜ್ಜಯಿನಿಯ ಕಣಿಪುರದಲ್ಲಿರುವ ತಿರುಪತಿ ಧಾಮದ ನಿವಾಸಿ ಅಥರ್ವ ಎಂಬ ಬಾಲಕ ಬೆನ್ನುಮೂಳೆಯ ಸ್ನಾಯು ಕ್ಷೀಣತೆ sma-2 ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಹಿಂದೆ ಬಾಲಕನ ಪೋಷಕರು ನಟ ಸೋನು ಸೂದ್ ಭೇಟಿಯಾಗಿ ಮಗುವಿನ ಕಾಯಿಲೆ ಕುರಿತು ದುಃಖ ಹಂಚಿಕೊಂಡಿದ್ದರು. ಹೀಗಾಗಿ, ಮಗುವಿನ ಆರೋಗ್ಯ ವಿಚಾರಿಸಲು ಆಗಮಿಸಿದ ನಟ, ಅಥರ್ವ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮಗುವಿನ ಚಿಕಿತ್ಸೆಗೆ ಸಾಧ್ಯವಾದಷ್ಟು ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಮಗುವಿನ ಚಿಕಿತ್ಸೆಯ ಒಂದು ಚುಚ್ಚುಮದ್ದಿಗೆ 16 ಕೋಟಿ ರೂ. ವೆಚ್ಚ ತಗುಲಿದೆ.
ಇನ್ನು ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಅಥರ್ವನ ತಂದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಇಬ್ಬರಿಗೂ ಮನವಿ ಮಾಡಿದ್ದಾರೆ. ಆದರೆ, 2 ತಿಂಗಳು ಕಳೆದರೂ ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂದರೇನು?:ಸ್ಪೈನ್ ಮಸ್ಕ್ಯುಲರ್ ಅಟ್ರೋಫಿ ಒಂದು ಆನುವಂಶಿಕ ಕಾಯಿಲೆ. 10,000 ದಲ್ಲಿ ಒಂದು ಮಗುವಿಗೆ ಈ ಕಾಯಿಲೆ ಬರಬಹುದು. ರೋಗದಿಂದ ಮಗುವಿನ ಚಲನೆ ನಿಧಾನವಾಗುತ್ತದೆ ಮತ್ತು ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದರಿಂದ ಮಗು ಸಾಯುವ ಸಾಧ್ಯತೆ ಇರುತ್ತದೆ ವೈದ್ಯರು ತಿಳಿಸಿದ್ದಾರೆ.