ನವದೆಹಲಿ: ದೇಶದ ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಚುನಾವಣಾ ರಾಜಕೀಯದ ಮೇಲೆ ಫೇಸ್ಬುಕ್ ಸೇರಿ ಇತರ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರುವುದನ್ನು ಕೊನೆಗಾಣಿಸಬೇಕೆಂದು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಸೋನಿಯಾ ಗಾಂಧಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದು. ಇಲ್ಲಿನ ಚುನಾವಣಾ ರಾಜಕೀಯದ ಮೇಲೆ ಫೇಸ್ಬುಕ್ ಸೇರಿದಂತೆ ಇತರ ದೈತ್ಯ ಸಾಮಾಜಿಕ ಮಾಧ್ಯಮಗಳು ವ್ಯವಸ್ಥಿಕವಾಗಿ ಪ್ರಭಾವ ಬೀರುವುದನ್ನು ಮತ್ತು ಹಸ್ತಕ್ಷೇಪ ಮಾಡುವುದನ್ನು ಕೊನೆಗೊಳಿಸಬೇಕು. ಇದು ಪಕ್ಷ ಮತ್ತು ರಾಜಕೀಯವನ್ನು ಮೀರಿದ ಒತ್ತಾಯವಾಗಿದ್ದು, ಯಾರೇ ಅಧಿಕಾರದಲ್ಲಿದ್ದರೂ ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ನಾವು ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ಸಾಮಾಜಿಕ ಮಾಧ್ಯಮಗಳ ದುರುಪಯೋಗ ಹೆಚ್ಚಾಗುತ್ತಿರುವುದು ಅಪಾಯಕಾರಿ. ರಾಜಕೀಯ ನಾಯಕರು, ಪಕ್ಷಗಳು ಮತ್ತು ಅವರನ್ನು ಪ್ರತಿನಿಧಿಸುವವರು ತಮ್ಮ ರಾಜಕೀಯ ನಿರೂಪಣೆಗಳನ್ನು ರೂಪಿಸಲು ಫೇಸ್ಬುಕ್, ಟ್ವಿಟರ್ನಂತಹ ಜಾಗತಿಕ ಕಂಪನಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಜಾಗತಿಕ ಸೋಷಿಯಲ್ ಮೀಡಿಯಾ ಕಂಪನಿಗಳು ಎಲ್ಲ ಪಕ್ಷಗಳಿಗೆ ಸಮಾನವಾಗಿ ಮೈದಾನ ಒದಗಿಸುತ್ತಿಲ್ಲ ಎಂಬುದು ಪದೇ ಪದೆ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ ಎಂದು ಸೋನಿಯಾ ತಿಳಿಸಿದರು.
ಭಾವನಾತ್ಮಕವಾಗಿ ಉದ್ರೇಕಿಸುವ ಮೂಲಕ ಯುವ ಮತ್ತು ಹಿರಿಯರ ಮನಸ್ಸುಗಳಲ್ಲಿ ದ್ವೇಷ ತುಂಬುತ್ತಿವೆ. ಆಡಳಿತಾರೂಢ ಸಂಸ್ಥೆಗಳ ಸಹಕಾರದೊಂದಿಗೆ ಫೇಸ್ಬುಕ್ ಮೂಲಕ ಸಾಮಾಜಿಕ ಸೌಹಾರ್ದತೆಗೆ ಭಂಗ ಉಂಟು ಮಾಡುತ್ತಿರುವ ಈ ರೀತಿಯ ಅಬ್ಬರದ ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:12-14 ವರ್ಷದೊಳಗಿನ ಮಕ್ಕಳ ಲಸಿಕೆಗೆ ಚಾಲನೆ: ಅರ್ಹರೆಲ್ಲರೂ ಲಸಿಕೆ ಪಡೆಯಲು ಪ್ರಧಾನಿ ಮನವಿ