ಕರ್ನಾಟಕ

karnataka

ETV Bharat / bharat

Sonia Gandhi: ಅದಾನಿ, ಎಂಎಸ್​ಪಿ, ಚೀನಾ ಅತಿಕ್ರಮಣ ಸೇರಿ 9 ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಿ.. ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ - ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ

ಮುಂಬರುವ ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ

By ETV Bharat Karnataka Team

Published : Sep 6, 2023, 1:47 PM IST

ನವದೆಹಲಿ:ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂಬತ್ತು ವಿಷಯಗಳ ಮೇಲೆ ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಕೋರಿ ಪತ್ರ ಬರೆದಿದ್ದಾರೆ.

ಐದು ದಿನಗಳ ಸಂಸತ್​ ಅಧಿವೇಶನವನ್ನು ಕರೆಯಲಾಗಿದೆ. ಈ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಸಮಾಲೋಚನೆ ನಡೆಸಲಾಗಿಲ್ಲ. ಸಂಸತ್ತಿನ ಕಾರ್ಯಸೂಚಿಯ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಹೀಗಾಗಿ ದೇಶದಲ್ಲಿನ ಹಲವು ಸಮಸ್ಯೆಗಳಲ್ಲಿ 9 ಗಂಭೀರ ವಿಚಾರಗಳನ್ನು ಚರ್ಚೆ ಮಾಡಲು ಅಧಿವೇಶನದಲ್ಲಿ ಸೂಕ್ತ ನಿಯಮಗಳ ಅಡಿಯಲ್ಲಿ ಸಮಯಾವಕಾಶ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೋನಿಯಾ ಗಾಂಧಿ ಪಟ್ಟಿ ಮಾಡಿದ ವಿಷಯಗಳಿವು..

1. ಪ್ರಸ್ತುತ ಆರ್ಥಿಕ ಸ್ಥಿತಿಗತಿಯು ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ನೀಡಿದೆ.

2. ಕನಿಷ್ಠ ಬೆಂಬಲ ಬೆಲೆ, ರೈತರು ಮತ್ತು ಅದರ ಸಂಘಟನೆಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಅಭಯದ ಕುರಿತು ಚರ್ಚೆ

3. ಅದಾನಿ ಸಮೂಹ ನಡೆಸಿದೆ ಎನ್ನಲಾದ ಅಕ್ರಮಗಳನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ(ಜೆಪಿಸಿ) ನೀಡಬೇಕು

4. ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆ ಮತ್ತು ರಾಜ್ಯದಲ್ಲಿ ಸಂವಿಧಾನ ನಿಯಮಗಳ ನಾಶ, ಸಾಮಾಜಿಕ ಸಾಮರಸ್ಯದ ಕುಸಿತದ ಕುರಿತು ಚರ್ಚೆ

5. ಹರಿಯಾಣದಂತಹ ವಿವಿಧ ರಾಜ್ಯಗಳಲ್ಲಿ ಕೋಮು ಗಲಭೆ

6. ಚೀನಾದಿಂದ ದೇಶದ ಭೂಪ್ರದೇಶದ ಅತಿಕ್ರಮಣ, ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಗಳಲ್ಲಿ ಸಾರ್ವಭೌಮತ್ವಕ್ಕೆ ಸವಾಲು.

7. ತುರ್ತು ಜಾತಿ ಗಣತಿ ನಡೆಸುವ ಕುರಿತು ಚರ್ಚೆ

8. ಕೇಂದ್ರ- ರಾಜ್ಯ ಸಂಬಂಧಗಳ ನಡುವಿನ ಕಂದಕ.

9. ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿ ಮತ್ತು ಇತರ ರಾಜ್ಯಗಳಲ್ಲಿ ಅನಾವೃಷ್ಟಿಯಿಂದ ಉಂಟಾದ ನೈಸರ್ಗಿಕ ವಿಕೋಪಗಳ ಪರಿಣಾಮ.

ಮಾಹಿತಿ ನೀಡದೇ ಅಧಿವೇಶನ -ಆರೋಪ:ಯಾವುದೇ ಸರ್ಕಾರ ಅಧಿವೇಶನ ಕರೆಯುವ ಮೊದಲು ವಿಪಕ್ಷಗಳ ಅಭಿಪ್ರಾಯ ಕೇಳಿಬೇಕು. ಆದರೆ, ಈ ಬಗ್ಗೆ ಪೂರ್ವ ಮಾಹಿತಿ ನೀಡದೇ ವಿಶೇಷ ಅಧಿವೇಶನ ಕರೆಯಲಾಗಿದೆ. ಇದು ಸಾರ್ವಜನಿಕ ಕಾಳಜಿ ಮತ್ತು ಪ್ರಮುಖ ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಬೇಕು. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಕಾಂಗ್ರೆಸ್​ ಪತ್ರದಲ್ಲಿ ಕೋರಿದೆ.

ಇನ್ನೂ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರ ಸಭೆ ನಡೆಸಲಾಗಿದೆ. ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ;Sanatan Dharma: ಹೊಸ ಸಂಸತ್​ ಭವನ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದಿರುವುದೇ ಸನಾತನ ಧರ್ಮದ ಭೇದ; ಉದಯನಿಧಿ ಸ್ಟಾಲಿನ್​

ABOUT THE AUTHOR

...view details