ನವದೆಹಲಿ:ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಜುಲೈ 21 ರಂದು ಇಡಿ ಮುಂದೆ ಹಾಜರಾಗಿದ್ದ ಸೋನಿಯಾರನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸೋನಿಯಾ ಅವರು ಪುತ್ರಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಡಿ ಕಚೇರಿಗೆ ವಿಚಾರಣೆಗೆ ತೆರಳಿದ್ದರು.
2 ಗಂಟೆಗಳ ವಿಚಾರಣೆಯ ಬಳಿಕ ಸೋನಿಯಾ ಗಾಂಧಿ ಅವರು ಔಷಧಿ ತೆಗೆದುಕೊಳ್ಳಬೇಕಿದ್ದ ಕಾರಣ ಮನೆಗೆ ಹಿಂತಿರುಗಿದರು. ಕಾಂಗ್ರೆಸ್ ಅಧ್ಯಕ್ಷೆ ಕೆಲ ದಿನಗಳ ಹಿಂದಷ್ಟೇ ಕೊರೊನಾಗೆ ತುತ್ತಾಗಿದ್ದರು. ಚೇತರಿಸಿಕೊಂಡಿರುವ ಅವರು ಕೊರೊನೋತ್ತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಜುಲೈ 21 ರ ವಿಚಾರಣೆಯ ಬಳಿಕ ಜುಲೈ 25 ರಂದು ಮತ್ತೆ ಬರುವಂತೆ ಇಡಿ ನೋಟಿಸ್ ನೀಡಿತ್ತು. ಬಳಿಕ ವಿಚಾರಣೆಯನ್ನು ಒಂದು ದಿನ ಮುಂದೂಡಿ ಮಂಗಳವಾರ ಬರಲು ಸೂಚಿಸಿತ್ತು.